ತುಮಕೂರು: ನಾನು ಎರಡು ಕ್ಷೇತ್ರಗಳ ಟಿಕೆಟ್ ಕೇಳಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿದ್ದೇನೆ. 2 ಕ್ಷೇತ್ರದ ಗೊಂದಲ ಯಾಕೆ ಬಂತೋ ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಡಾ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯ ಕೊರಟಗೆರೆಯಲ್ಲಿ ನಡೆದ ಬಲಿಜ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಕ್ಕಿ ಕೊಡದಿದ್ದರೆ ಬಡವರು ಊಟ ಮಾಡಲು ಆಗುತ್ತಿರಲಿಲ್ಲ. ಯಾಕಿಷ್ಟು ಅಕ್ಕಿ ಕೊಡುತ್ತಿದ್ದೀರಾ ಅಂತ ಸಿದ್ದರಾಮಯ್ಯಗೆ ಕೇಳಿದೆ, ಆಗ ಸಿದ್ದರಾಮಯ್ಯ ತಮ್ಮ ಗ್ರಾಮದ ಸ್ಥಿತಿ ಬಗ್ಗೆ ವಿವರಿಸಿ ಹೇಳಿದರು. ಹಬ್ಬ ಅಥವಾ ಅನಾರೋಗ್ಯದ ವೇಳೆ ಮಾತ್ರ ಅನ್ನ ತಿನ್ನಬೇಕಿತ್ತು. ಅದಕ್ಕಾಗಿ ಸಿದ್ದರಾಮಯ್ಯ ಬಡವರಿಗೆ ಉಚಿತವಾಗಿ ಅಕ್ಕಿ ನೀಡಿದರು.
ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಿದೆ. ಮೋದಿ ರಾಜ್ಯಕ್ಕೆ ಬಂದಾಗ 10% ಲಂಚದ ಬಗ್ಗೆ ಆರೋಪಿಸಿದ್ದರು. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಮೋದಿ ಆರೋಪಿಸಿದ್ದರು. ಆದರೆ ಈಗ ನಿಮ್ಮ ಸಿಎಂ 40% ಲಂಚ ತೆಗೆದುಕೊಳ್ತಿದ್ದಾರಲ್ಲ? ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಏನು ಮಾತನಾಡುತ್ತಿಲ್ಲ. ಪ್ರಣಾಳಿಕೆಯಲ್ಲಿ ಘೋಷಿಸಿರುವುದನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಸಿಎಂ ಆದಾಗ ಎತ್ತುನಹೊಳೆ ಯೋಜನೆ ಮಾಡಿದ್ದೇವೆ. ಇಂದು ಅದು 20 ಸಾವಿರ ಕೋಟಿಯಾಗಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ನೀರು ಹರಿಸುತ್ತೇವೆ. ಬೈರಗೊಂಡ್ಲು ಡ್ಯಾಮ್ ಬದಲಾಯಿಸಿಲು ಹೊರಟಿದ್ದರು. ಆದರೆ ಅದನ್ನ ಸದ್ಯಕ್ಕೆ ನಿಲ್ಲಿಸಲಾಗಿದೆ. ಜೆಡಿಎಸ್ ಹೇಳುತ್ತೆ ಸರ್ಕಾರ ಮಾಡುತ್ತೇವೆ ಅಂತಾ, ಇದು ವಿಪರ್ಯಾಸ, ಅವರು ನಮ್ಮ ಜೊತೆ ಅಥವಾ ಬಿಜೆಪಿ ಜೊತೆ ಅಧಿಕಾರ ಮಾಡಬೇಕು ಎಂದು ಕಿಡಿಕಾರಿದರು.
ನಮ್ಮ ಸರ್ಕಾರ ಮುಂದುವರೆದಿದ್ದರೇ ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ಜಾರಿ ತರುವ ಕೆಲಸ ಮಾಡುತ್ತಿದೆ. ಬಲಿಜ ಸಮುದಾಯದಲ್ಲಿ ಬಡವರು ಇದ್ದಾರೆ. ಅಂತವರಿಗೆ ನ್ಯಾಯ ಸಿಗಬೇಕಿದೆ. ಬಡವರ ಪರವಾಗಿ ಕಾಂಗ್ರೆಸ್ ಪಕ್ಷ ನಿಂತಿದೆ. ನ್ಯಾಯ ಕೇಳುವ ಸಮಾಜಗಳಿಗೆ ಸೂಕ್ತ ನ್ಯಾಯ ಕೊಡುವ ಕೆಲಸ ಬಿಜೆಪಿ ಮಾಡಿಲ್ಲ. ಯಾವುದೇ ಅರ್ಜಿ ಪಡೆಯದೇ ಅವರಿಗೆ ಕೇಂದ್ರ ಸರ್ಕಾರ 10% ಮೀಸಲಾತಿ ಕೊಡುವ ಕೆಲಸ ಮಾಡಿದೆ. ನಿಜವಾದ ಅನ್ಯಾಯವಾದ ಸಮಾಜದವರಿಗೆ ಮೀಸಲಾತಿ ಕಲ್ಪಿಸಿಲ್ಲ ಎಂದು ವಾಗ್ದಾಳಿ ಮಾಡಿದರು.