ಮನೆ ರಾಷ್ಟ್ರೀಯ ತಮಿಳುನಾಡಿನಲ್ಲಿ ಮುಂದುವರೆದ ಮಳೆ: ಮೂವರ ಸಾವು, ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್

ತಮಿಳುನಾಡಿನಲ್ಲಿ ಮುಂದುವರೆದ ಮಳೆ: ಮೂವರ ಸಾವು, ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್

0

ಚೆನ್ನೈ: ದಕ್ಷಿಣ ತಮಿಳುನಾಡಿನಲ್ಲಿ ಮಂಗಳವಾರವೂ ಭಾರೀ ಮಳೆ ಮುಂದುವರಿದಿದೆ. ಮಳೆ ಸಂಬಂಧಿತ ಅವಘಡಗಳಿಂದ ಮೂವರು ಸಾವನ್ನಪ್ಪಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದು ನಾಲ್ಕು ಜಿಲ್ಲೆಗಳಾದ ಕನ್ಯಾಕುಮಾರಿ, ತಿರುನಲ್ವೇಲಿ, ತೂತುಕುಡಿ ಮತ್ತು ತೆಂಕಶಿಯಲ್ಲಿ ಹಳದಿ ಅಲರ್ಟ್ ಘೋಷಿಸಿದೆ.

ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ ನ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ ಎಂದು ಐಎಂಡಿ ತಿಳಿಸಿದೆ.

ಟುಟಿಕೋರಿನ್ ಜಿಲ್ಲೆಯ ಶ್ರೀವೈಕುಂಟಂ ರೈಲು ನಿಲ್ದಾಣದಲ್ಲಿ ಕಳೆದ 24 ಗಂಟೆಗಳಿಂದ ಸುಮಾರು 500 ಪ್ರಯಾಣಿಕರು ಸಿಕ್ಕಿಹಾಕಿಕೊಂಡಿದ್ದು, ಭಾರೀ ಮಳೆಯ ನಂತರ ನಿಲ್ದಾಣವು ಜಲಾವೃತವಾಗಿದೆ ಮತ್ತು ರೈಲು ಹಳಿಗಳು ಹಾನಿಗೊಳಗಾಗಿವೆ. ಭಾರತೀಯ ವಾಯುಪಡೆಯು ಸಿಕ್ಕಿಬಿದ್ದ ರೈಲು ಪ್ರಯಾಣಿಕರಿಗೆ ಏರ್-ಡ್ರಾಪಿಂಗ್ ಪರಿಹಾರ ಸಾಮಗ್ರಿಗಳನ್ನು ಪ್ರಾರಂಭಿಸಿದೆ ಮತ್ತು ಅಸ್ವಸ್ಥ ಪ್ರಯಾಣಿಕರನ್ನು IAF ಹೆಲಿಕಾಪ್ಟರ್‌ಗಳ ಮೂಲಕ ಏರ್ ಲಿಫ್ಟ್ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ದಕ್ಷಿಣ ತಮಿಳುನಾಡಿನ 39 ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಗದ್ದೆಗಳು, ರಸ್ತೆಗಳು ಮತ್ತು ಸೇತುವೆಗಳು ಮುಳುಗಡೆಯಾಗಿದ್ದು, ಅನೇಕ ವಸತಿ ಕಾಲೋನಿಗಳು ನೀರಿನಿಂದ ತುಂಬಿವೆ. ಕೆರೆಗಳು ಒಡೆದು ಪ್ರವಾಹ ಉಂಟಾದ ಪರಿಣಾಮ ಹಲವಾರು ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ.

ಮಳೆಯ ಹಿನ್ನೆಲೆಯಲ್ಲಿ ತಿರುನಲ್ವೇಲಿ ಮತ್ತು ತೂತುಕುಡಿ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅದೇ ರೀತಿ ಕನ್ಯಾಕುಮಾರಿ ಮತ್ತು ತೆಂಕಶಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ.

ಮಳೆಯಿಂದಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದ್ದು. ಹಲವಾರು ಪ್ರದೇಶಗಳಲ್ಲಿ ಮೊಬೈಲ್ ಫೋನ್ ಸಂಪರ್ಕಕ್ಕೆ ತೊಂದರೆ ಉಂಟಾಗಿದೆ.

ಹವಾಮಾನ ಇಲಾಖೆಯ ಪ್ರಕಾರ, ದಕ್ಷಿಣ ತಮಿಳುನಾಡು ಕರಾವಳಿಯುದ್ದಕ್ಕೂ ಮತ್ತು ಮನ್ನಾರ್ ಗಲ್ಫ್, ಕೊಮೊರಿನ್ ಪ್ರದೇಶ, ಲಕ್ಷದ್ವೀಪ ಪ್ರದೇಶದಲ್ಲಿ ಗಂಟೆಗೆ 40-45 ಕಿಲೋಮೀಟರ್ ವೇಗದಲ್ಲಿ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದು ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ.

ಹಿಂದಿನ ಲೇಖನಮೈಸೂರು: ಬೋನಿಗೆ ಬಿದ್ದ ಚಿರತೆ
ಮುಂದಿನ ಲೇಖನರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಿದ್ದು ಹೋಗಿದೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ