ನವದೆಹಲಿ (New Delhi): ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅನಾವರಣಗೊಳಿಸಿದ ನೂತನ ಸಂಸತ್ ಭವನದ ಮೇಲಿನ ರಾಷ್ಟ್ರೀಯ ಲಾಂಛನ ಹೊಸ ವಿವಾದ ಸೃಷ್ಟಿಸಿದೆ. ರಾಷ್ಟ್ರೀಯ ಲಾಂಛನವನ್ನು ಮಾರ್ಪಡಿಸಲಾಗಿದೆ ಮತ್ತು ಅವಮಾನಿಸಲಾಗಿದೆ ಎಂದು ವಿಪಕ್ಷಗಳು ಆರೋಪಿಸಿವೆ. ಅಲ್ಲದೆ, ಕಾರ್ಯಾಂಗದ ಮುಖ್ಯಸ್ಥರಾಗಿರುವ ಪ್ರಧಾನಿ, ಈ ಲಾಂಛನವನ್ನು ಅನಾವರಣ ಮಾಡಿದ್ದು ಏಕೆ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿದೆ.
ಆದರೆ ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಈ ಬೃಹತ್ ಶಿಲ್ಪವನ್ನು ವಿನ್ಯಾಸಗೊಳಿಸಿದ ಶಿಲ್ಪಿಗಳು, ಲಾಂಛನದ ಮಾನದಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ರಾಷ್ಟ್ರ ಲಾಂಛನದಲ್ಲಿನ ಸಿಂಹಗಳು ಸೌಮ್ಯ ಭಾವನೆಗಳನ್ನು ಹೊರಹೊಮ್ಮಿಸುವುದಕ್ಕೆ ಹೆಸರಾಗಿವೆ. ಆದರೆ, ಈ ಹೊಸ ಶಿಲ್ಪದಲ್ಲಿ ‘ನರಭಕ್ಷಕ ಪ್ರವೃತ್ತಿ’ಯನ್ನು ಬಿಂಬಿಸಿದಂತೆ ಕಾಣಿಸುತ್ತಿವೆ ಎಂದು ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಟ್ವೀಟ್ ಮಾಡಿದೆ.
ಬಿಜೆಪಿಯ ಚಂದ್ರ ಕುಮಾರ್ ಬೋಸ್, ಪ್ರತಿಯೊಂದೂ ಸಮಾಜದಲ್ಲಿ ಉಗಮವಾಗುತ್ತದೆ. ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ನಾವು ಕೂಡ ಬೆಳೆದಿದ್ದೇವೆ. ಕಲಾವಿದನ ಭಾವನೆಗೆ ಸರ್ಕಾರದ ಅನುಮತಿ ಅಗತ್ಯವಿಲ್ಲ. ಎಲ್ಲದಕ್ಕೂ ನೀವು ಭಾರತ ಸರ್ಕಾರ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಜವಾಹರ್ ಸಿರ್ಕಾರ್ ಅವರು ಹೇಳಿರುವಂತೆ ಲಾಂಛನದಲ್ಲಿ ಬದಲಾವಣೆ ಇದೆ ಎಂಬುದನ್ನು ನಾವು ಒಪ್ಪುತ್ತೇನೆ. ಆದರೆ ನಮ್ಮನ್ನು ಯಾವಾಗಲೂ ಟೀಕಿಸಬೇಡಿ. ಬಹುಶಃ ಭಾರತ ಇಂದು ಬದಲಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಕಾಳಿ ಕುರಿತಾದ ಹೇಳಿಕೆಯಿಂದ ವಿವಾದದಲ್ಲಿರುವ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ, ಹಳೆಯ ಮತ್ತು ಹೊಸ ಲಾಂಛನಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಅದರಲ್ಲಿ ಯಾವುದೇ ಹೇಳಿಕೆ ನೀಡಿಲ್ಲ.
ನೂತನ ಸಂಸತ್ ಭವನದ ಮೇಲಿನ ಲಾಂಛನದ ವಿನ್ಯಾಸಕಾರರಾದ ಸುನೀಲ್ ಡಿಯೋರೆ ಮತ್ತು ರೋಮೀಲ್ ಮೋಸೆಸ್, ಯಾವುದೇ ವ್ಯತ್ಯಾಸ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ನಾವು ಸೂಕ್ಷ್ಮವಾಗಿ ಗಮನ ಹರಿಸಿದ್ದೇವೆ. ಸಿಂಹಗಳ ಗುಣಗಳು ಅದೇ ರೀತಿ ಇದೆ. ಅಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳು ಇರಬಹುದು. ಜನರು ವಿಭಿನ್ನ ವ್ಯಾಖ್ಯಾನಗಳನ್ನು ಹೊಂದಿರುತ್ತಾರೆ. ಇದು ಬಹಳ ದೊಡ್ಡ ಪ್ರತಿಮೆ. ಕೆಳಗಿನಿಂದ ಅದನ್ನು ನೋಡಿದಾಗ ವಿಭಿನ್ನ ಗ್ರಹಿಕೆ ಮೂಡಬಹುದು ಎಂದು ಅವರು ಹೇಳಿದ್ದಾರೆ. ಕಲಾವಿದರಾಗಿ ತಮಗೆ ಈ ಕೆಲಸದ ಬಗ್ಗೆ ಹೆಮ್ಮೆ ಇರುವುದಾಗಿ ತಿಳಿಸಿದ್ದಾರೆ.