ಮನೆ ಸುದ್ದಿ ಜಾಲ ವಿವಾದಿತ ಟಿಪ್ಪು ಜಯಂತಿ ಮತ್ತೆ ಸದ್ದು; ಕಾಂಗ್ರೆಸ್-ಬಿಜೆಪಿ ವಾಗ್ದಾಳಿ

ವಿವಾದಿತ ಟಿಪ್ಪು ಜಯಂತಿ ಮತ್ತೆ ಸದ್ದು; ಕಾಂಗ್ರೆಸ್-ಬಿಜೆಪಿ ವಾಗ್ದಾಳಿ

0

ಬೆಂಗಳೂರು : ರಾಜ್ಯದಲ್ಲಿ ಟಿಪ್ಪು ಜಯಂತಿ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಈ ವಿಚಾರವನ್ನು ಸದನದಲ್ಲಿ ಸರ್ಕಾರದ ಗಮನಕ್ಕೆ ತರಲು ಶಾಸಕ ವಿಜಯಾನಂದ ಕಾಶಪ್ಪನವರ್ ಮುಂದಾಗಿದ್ದಾರೆ. ಆದರೆ, ಟಿಪ್ಪು ಜಯಂತಿಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

ಮತ್ತೆ ಟಿಪ್ಪು ಜಯಂತಿಗೆ ಪ್ರಸ್ತಾಪ ವಿಚಾರವನ್ನು ಕಾಶಪ್ಪನವರ್ ಸಮರ್ಥಿಸಿಕೊಂಡಿದ್ದಾರೆ. ಎಲ್ಲಾ ಜಾತಿ, ಜನಾಂಗ ಇರುವ ಜಾತ್ಯತೀತ ರಾಷ್ಟ್ರದಲ್ಲಿ ಯಾಕೆ ವಿರೋಧ? ಅಲ್ಪಸಂಖ್ಯಾತರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ವಾ? ಯಡಿಯೂರಪ್ಪ, ಶೆಟ್ಟರ್ ಟಿಪ್ಪು ವೇಷ ಹಾಕಿರಲಿಲ್ವಾ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿ, ಪ್ರತಿ ವರ್ಷ ಕರ್ನಾಟಕ ಸೇರಿ ದೇಶಾದ್ಯಂತ ಟಿಪ್ಪು ಜಯಂತಿಯನ್ನು ಅಭಿಮಾನಿಗಳು ಆಚರಿಸಿಕೊಂಡು ಬರುತ್ತಿದ್ದಾರೆ. ಅದೇನು ನಿಂತಿಲ್ಲ. ರಾಜ್ಯದಲ್ಲೂ 2014ರ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಬ್ಯಾಂಕ್ವೆಟ್ ಹಾಲ್‌ನಲ್ಲಿ ಟಿಪ್ಪು ಜಯಂತಿ ಆಚರಿಸುತ್ತಿದ್ದರು. ಬಿಜೆಪಿ ಅವಧಿಯಲ್ಲಿ ಅದನ್ನು ನಿಲ್ಲಿಸಲಾಯಿತು.

ಈಗ ಮತ್ತೆ ಟಿಪ್ಪು ಜಯಂತಿ ಆಚರಣೆಗೆ ಮುಸ್ಲಿಂ ಮುಖಂಡರಿಂದ ಯಾವುದೇ ಮನವಿ ಬಂದಿಲ್ಲ. ಈಗ ಸರ್ಕಾರ ವತಿಯಿಂದ ಟಿಪ್ಪು ಜಯಂತಿ ಆಚರಣೆ ಬೇಡ ಅನ್ನೋದು ನನ್ನ ಅಭಿಪ್ರಾಯ. ಸಾರ್ವಜನಿಕ ವಲಯದಲ್ಲಿ ನಾವು ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಲೀಂ ಅಹ್ಮದ್ ಮಾತನಾಡಿ, ಟಿಪ್ಪು ಜಯಂತಿಯನ್ನು ಸರ್ಕಾರ ಆಚರಣೆ ಮಾಡಬೇಕು. ಈ ಕುರಿತು ಸದನದಲ್ಲಿ ಚರ್ಚೆ ನಡೆಯಬೇಕು ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿರುವುದು ವೈಯಕ್ತಿಯ ಅಭಿಪ್ರಾಯ. ಈ ಕುರಿತು ಸದನದಲ್ಲಿ ಮಾತನಾಡುತ್ತೇನೆ. ಟಿಪ್ಪು ಒಬ್ಬ ದೇಶಭಕ್ತ, ಜಯಂತಿ ಆಚರಣೆ ಮಾಡಿದರೆ ತಪ್ಪೇನಿದೆ ಎಂದು ಸಲೀಮ ಅಹ್ಮದ್ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕರ ಹೇಳಿಕೆ ವಿಪಕ್ಷ ನಾಯಕರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಎಂದರೆ ಟಿಪ್ಪು ಪಾರ್ಟಿ. ಪ್ರಚಾರ ಗಿಟ್ಟಿಸಲು ಈ ಟ್ರಿಕ್. ಇಸ್ಲಾಂನಲ್ಲಿ ವ್ಯಕ್ತಿಗಳ ಜಯಂತಿ ಆಚರಣೆ ಮಾಡುವುದು ನಿಷೇಧವಿದೆ. ಅಧಿವೇಶನದಲ್ಲಿ ಕಾಲಹರಣ ಮಾಡಲು ಟಿಪ್ಪು ಕಾರ್ಡ್ ಉಪಯೋಗಿಸುತ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.