ಮೈಸೂರು(Mysuru): ಶ್ರಮ ಜೀವಿಗಳನ್ನು ಸುಲಭ ಜೀವಿಗಳನ್ನಾಗಿ ಮತಾಂತರಗೊಳಿಸುವ ಕಾರ್ಯಯನ್ನು ವಿಶ್ವವಿದ್ಯಾಲಯಗಳು ಮಾಡುತ್ತಿವೆ. ಇದರಿಂದ ಶ್ರಮ ಜೀವಿಗಳನ್ನು ಕೀಳಾಗಿ ನೋಡುವ ಮನೋಭಾವ ಬೆಳೆಯುತ್ತದೆ ಎಂದು ರಂಗಕರ್ಮಿ ಪ್ರಸನ್ನ ಬೇಸರಿಸಿದರು.
ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯಿಂದ ಎನ್‌ಎಸ್‌ಎಸ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ 2020–21ನೇ ಸಾಲಿನ ‘ಎನ್‌ಎಸ್‌ಎಸ್ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮಲ್ಲಿರುವುದು ಎರಡೇ ಜಾತಿ. ಒಂದು ಸುಲಭ ಜೀವಿಗಳದ್ದು, ಇನ್ನೊಂದು ಶ್ರಮ ಜೀವಿಗಳದ್ದು. ಶ್ರಮಜೀವಿಗಳನ್ನು ಸುಲಭ ಜೀವಿಗಳನ್ನಾಗಿಸುವುದೇ ದೊಡ್ಡ ಸಾಧನೆ ಎಂಬಂತೆ ವಿಶ್ವವಿದ್ಯಾಲಯದವರು ಸೇರಿದಂತೆ ಎಲ್ಲರೂ ಹೆಮ್ಮೆ ಪಟ್ಟುಕೊಳ್ಳುತ್ತಿದ್ದೇವೆ. ಹೀಗೆ ಮತಾಂತರವಾದವರು ಶ್ರಮಜೀವಿಗಳನ್ನು ಕೀಳಾಗಿ ನೋಡುವ ಮನೋಭಾವವನ್ನೂ ಬೆಳೆಸಿಕೊಳ್ಳುತ್ತಾರೆ. ಇದನ್ನು ವಿಶ್ವವಿದ್ಯಾಲಯಗಳು ಕಲಿಸುತ್ತಿರುವುದು– ಬೆಳೆಸುತ್ತಿರುವುದು ವಿಷಾದದ ಸಂಗತಿ ಎಂದರು.
ಅಧಿಕೃತ ಕಾರ್ಯಕ್ರಮಗಳಲ್ಲಿ ಸತ್ಯ ಮಾತನಾಡುವುದು ಕಷ್ಟ ಎಂದ ಅವರು, ಇವತ್ತಿನ ಸಂದರ್ಭ ಬಹಳ ಅಪಾಯಕಾರಿಯಾದುದಾಗಿದೆ. ನಾವೆರಲ್ಲರೂ ಸುಲಭ ಜೀವಿಗಳಾಗುವ ಅವಸರದಲ್ಲಿ ಇಡೀ ವಿಶ್ವವನ್ನೇ ಅಪಾಯಕ್ಕೆ ಸಿಲುಕಿಸಿದ್ದೇವೆ. ಹೀಗೆಯೇ ಮುಂದುವರಿದರೆ ವಿಶ್ವವೇ ಇರುವುದಿಲ್ಲ. ಇದನ್ನು ವಿಜ್ಞಾನಿಗಳೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಸಾಮೂಹಿಕ ಆತ್ಮಹತ್ಯೆಯ ಕಡೆಗೆ: ಮನುಕುಲವು ಸಾಮೂಹಿಕ ಆತ್ಮಹತ್ಯೆಯ ಕಡೆಗೆ ಹೊರಟಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ದಾರಿದೀಪ ಆಗಬೇಕಾಗಿದ್ದ ವಿಶ್ವವಿದ್ಯಾಲಯಗಳು ಯಾವ ಪಾತ್ರ ವಹಿಸುತ್ತಿದ್ದೇವೆ? ನಾವೆಲ್ಲರೂ ಪ್ರಕೋಪ ತಡೆಯುತ್ತಿದ್ದೇವೆಯೇ ಅಥವಾ ಮುಂದುವರಿಸುತ್ತಿದ್ದೇವೆಯೇ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ, ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಟಿ.ಸುರೇಶ್ ಪಾಲ್ಗೊಂಡಿದ್ದರು.
ಇದೇ ಸಂದರ್ಭ ಸಾಧಕರಿಗೆಅತ್ಯುತ್ತಮ ಘಟಕಗಳು, ಅತ್ಯುತ್ತಮ ಕಾರ್ಯಕ್ರಮಾಧಿಕಾರಿಗಳು, ಅತ್ಯುತ್ತಮ ಸ್ವಯಂಸೇವಕಿಯರು: ಉ.ಕಾ. ಸುಬ್ಬರಾಯಾಚಾರ್ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಯಿತು.