ಮೈಸೂರು(Mysuru): ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಆರೋಪದಲ್ಲಿ ಬಂಧಿತನಾಗಿರುವ ಶಾರೀಕ್ ಬಾಡಿಗೆ ಮನೆ ಪಡೆಯಲು ನೀಡಿದ್ದ ಧಾರವಾಡ ಮೂಲದ ಪ್ರೇಮರಾಜ್ ಅವರ ನಕಲಿ ಆಧಾರ್ ಕಾರ್ಡ್’ನ ವಿಳಾಸವನ್ನೇ ನೀಡಿ ಮೊಬೈಲ್ ತರಬೇತಿ ಪಡೆಯಲು ಸೇರಿಕೊಂಡಿದ್ದ ಎಂಬ ವಿಚಾರ ಬಯಲಾಗಿದೆ.
ಅಗ್ರಹಾರದಲ್ಲಿರುವ ಡಿ. ಬನಮಯ್ಯ ರಸ್ತೆಯಲ್ಲಿರುವ ಎಸ್’ಎಂಎಂ ಮೊಬೈಲ್ ಫೋನ್ ತರಬೇತಿ ಕೇಂದ್ರಕ್ಕೆ ಸೇರಲು ನಕಲಿ ಆಧಾರ್ ಕಾರ್ಡ್ ನೀಡಿರುವುದಾಗಿ ಸಂಸ್ಥೆಯ ಮುಖ್ಯಸ್ಥ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಆಧಾರ್ ಕಾರ್ಡ್’ನಲ್ಲಿ ಪ್ರೇಮರಾಜ್ ಚಿತ್ರಕ್ಕೆ ಶಾಕೀರ್ ತನ್ನ ಚಿತ್ರ ಬದಲಾಯಿಸಿ ಸಂಸ್ಥೆಗೆ ದಾಖಲೆಗಳನ್ನು ನೀಡಿದ್ದ. ಹೀಗಾಗಿ, ದಾಖಲೆ ಪರಿಶೀಲನೆ ವೇಳೆ ಯಾವುದೇ ಅನುಮಾನಗಳು ಬಂದಿರಲಿಲ್ಲ. ಆನ್’ಲೈನ್ ಮೂಲಕ ಜಾಹೀರಾತು ಗಮನಿಸಿ, ಸಂಸ್ಥೆಗೆ ಸೇರಲು ಬಯಸಿದ್ದ. ನನಗೆ ಕಾಲ್’ಸೆಂಟರ್‌ನಲ್ಲಿ ಕೆಲಸ ಸಿಕ್ಕಿದ್ದು, 15 ದಿನಗಳ ನಂತರ ಕೆಲಸಕ್ಕೆ ಸೇರಲಿದ್ದೇನೆ. ಮನೆಗೆ ಕೂರಲು ಬೇಸರವಾಗಿ ಈ ಕೋರ್ಸ್ ಸೇರಲು ಇಚ್ಚಿಸಿದ್ದೇನೆ ಎಂದು ಆತ ತಿಳಿಸಿದ್ದ ಎಂದರು.
ಡಿಪಿಯಲ್ಲಿ ಶಿವನ ಫೋಟೋ ಹಾಕಿದ್ದ : ಮೊಬೈಲ್ ತರಬೇತಿಗಾಗಿಯೇ 10 ಮೊಬೈಲ್’ಗಳನ್ನು ಖರೀದಿಸಿದ್ದ ಈತ, ತರಗತಿಗೆ ಆಗಾಗ ಗೈರಾಗುತ್ತಿದ್ದ. ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿದ್ದ. ಹಾವಭಾವಗಳಲ್ಲಿ ವ್ಯತ್ಯಾಸವಿರಲಿಲ್ಲ. ಮೊಬೈಲ್ ಡಿ.ಪಿಯಲ್ಲೂ ಶಿವನ ಚಿತ್ರ ಹಾಕಿಕೊಂಡಿದ್ದರಿಂದ ಮುಸ್ಲಿಂ ಎಂಬ ಅನುಮಾನ ಬಂದಿರಲಿಲ್ಲ ಎಂದರು.
ನಗರದಲ್ಲಿ ನಾಕಾಬಂಧಿ ಹೆಚ್ಚಿಸಿದ ಪೊಲೀಸರು: ಶಂಕಿತ ಆರೋಪಿ ಮೈಸೂರಿನಲ್ಲಿಯೇ ಬಾಂಬ್ ತಯಾರಿಸುತ್ತಿದ್ದ ಅಂಶ ಖಚಿತಪಡುತ್ತಿದ್ದಂತೆಯೇ, ಪೊಲೀಸರು ನಗರದಲ್ಲಿ ನಾಕಾಬಂಧಿ ಹೆಚ್ಚಿಸಿದ್ದಾರೆ.
ಭಾನುವಾರ ರಾತ್ರಿಯಿಂದಲೇ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಚೆಕ್‌ಪೋಸ್ಟ್’ಗಳಲ್ಲಿ ದಿನದ 24 ಗಂಟೆಯೂ ವಾಹನ, ದಾಖಲೆಗಳ ಪರಿಶೀಲನೆಯಲ್ಲಿ ಪೊಲೀಸರು ತೊಡಗಿದ್ದಾರೆ.
ಹೊರಜಿಲ್ಲೆ, ಹೊರರಾಜ್ಯ ವಾಹನಗಳ ಮೇಲೆ ಹೆಚ್ಚಿನ ನಿಗಾವಹಿಸಿದ್ದು, ದೋಷಪೂರಿತ ನೋಂದಣಿ ಸಂಖ್ಯೆ, ಅನುಮಾನಸ್ಪದ ವ್ಯಕ್ತಿಗಳ ಮೇಲೂ ಹೆಚ್ಚಿನ ಕಣ್ಗಾವಲಿಟ್ಟಿದ್ದಾರೆ.