ಮನೆ ಮನೆ ಮದ್ದು ಕೊತ್ತಂಬರಿ

ಕೊತ್ತಂಬರಿ

0

ಅಡುಗೆ : ಕೊತ್ತಂಬರಿ ಸೊಪ್ಪನ್ನು ಎಲ್ಲ ರೀತಿಯ ಅಡುಗೆಗಳಲ್ಲಿ ಉಪಯೋಗಿಸುತ್ತಾರೆ. ಅಡುಗೆ ತಯಾರಾದ ಮೇಲೆ ಸೊಪ್ಪನ್ನು ಮೇಲ್ಗಡೆ ಉದುರಿಸಬೇಕು. ಎಲ್ಲ ಸಲಾಡ್ ಗಳಲ್ಲಿ ಇದನ್ನು ಬಳಸಬಹುದು. ಯಾವುದೇ ಬಗೆಯ ಚಟ್ನಿಯಿರಲಿ ಕೋತಂಬರಿ ಸೊಪ್ಪು ಹಾಕಬಹುದು. ಕೊತ್ತಂಬರಿ ಸೊಪ್ಪನ್ನು ರುಬ್ಬಿ ಒಣಗಿಸಿ ತೆಗೆದಿಟ್ಟುಕೊಂಡಲ್ಲಿ ಸೊಪ್ಪು ದೊರೆಯದ ಕಾಲದಲ್ಲಿ ಬಳಸಬಹುದು. ದೋಸೆ ಹಿಟ್ಟು, ಚಪಾತಿ ಹಿಟ್ಟಿಗೆ ಸೊಪ್ಪು ಬೆರೆಸಿ ತಯಾರಿಸುವುದರಿಂದ ಉತ್ತಮ ಪರಿಮಳ ಬರುವುದಲ್ಲದೆ ರುಚಿಕರವೂ ಆಗಿರುತ್ತದೆ.
ಕೊತ್ತಂಬರಿ ಸೊಪ್ಪಿನಲ್ಲಿ ಪರಿಮಳಕ್ಕೆ ಅದರಲ್ಲಿನ ತೈಲಾಂಶವೇ ಕಾರಣ. ಇದು ಪಿತ್ತನಾಶಕವಾಗಿದೆ.

Join Our Whatsapp Group

ಕೊತ್ತಂಬರಿ ಚಟ್ನಿ : ದೊಡ್ಡ ಕಟ್ಟು ಇದ್ದರೆ ಎರಡು ಕಟ್ಟು ಕೊತ್ತಂಬರಿ ಸೊಪ್ಪು, ಚಿಕ್ಕದಾದರೆ ನಾಲ್ಕು ಕಟ್ಟು, ಒಣಮೆಣಸಿನಕಾಯಿ ನಾಲ್ಕು, ಕಡಲೆ ಬೇಳೆ ಎರಡು ಚಮಚೆ, ಉದ್ದಿನಬೇಳೆ ಎರಡು ಚಮಚೆ, ಜೀರಿಗೆ ಎರಡು ಚಮಚೆ ಹುಣಸೆ ರಸ ಸ್ವಲ್ಪ, ಒಣಕೊಬ್ಬರಿ ತುರಿ ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಬೇಕೆನಿಸಿದ್ದಲ್ಲಿ ಬೆಲ್ಲ ಹಾಕಬಹುದು ಎಣ್ಣೆ ಸ್ವಲ್ಪ.
ಕೊತ್ತಂಬರಿ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಬಿಡಿಸಿಟ್ಟುಕೊಳ್ಳಬೇಕು. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಕೊತ್ತಂಬರಿ ಸೊಪ್ಪು ಹಾಕಿ ಹುರಿದುಕೊಳ್ಳಬೇಕು.ನಂತರ ಕಡಲೆಬೇಳೆ,ಉದ್ದಿನಬೇಳೆ, ಜೀರಿಗೆ,ಒಣ ಮೆಣಸಿನ ಕಾಯಿ ಒಗ್ಗರಣೆಗೆ ಹಾಕಿಕೊಳ್ಳಬೇಕು. ಅದಕ್ಕೆ ಹುಣಸೆರಸ, ಉಪ್ಪು, ಬೆಲ್ಲ ಬೆರಸಿ ಮಿಕ್ಸಿಗೆ ಹಾಕಿ ಚಟ್ನಿ ತಯಾರಿಸಬೇಕು.ಇದಕ್ಕೆ ನೀರು ಹಾಕದೇ ರುಬ್ಬಿಕೊಳ್ಳಬೇಕು. ಈ ಚಟ್ನಿಯನ್ನು ಒಂದು ವಾರ ಕಾಲ ಇಟ್ಟರೂ ಹಾಳಾಗುವುದಿಲ್ಲ.ಅನ್ನ ರೊಟ್ಟಿ, ಚಪಾತಿಯೊಂದಿಗೆ ತಿನ್ನಲು ರುಚಿ.

ಕೊತ್ತಂಬರಿ ಸೊಪ್ಪಿನ ಸಂಡಿಗೆ : ಕೊತ್ತಂಬರಿ ಸೊಪ್ಪು ಆರು ಕಟ್ಟು, ಹಸಿಮೆಣಸಿನಕಾಯಿ 6 8 ಹಿಂಗು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಕಡಲೆ ಹಿಟ್ಟು ಅರ್ಧ ಚಮಚೆ.
ಕೊತ್ತಂಬರಿ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಬಿಡಿಸಿಕೊಳ್ಳಬೇಕು. ಇದಕ್ಕೆ ಹಸಿಮೆಣಸಿನಕಾಯಿ, ಹಿಂಗು, ಉಪ್ಪು, ಕಡಲೆಹಿಟ್ಟು ಬೆರೆಸಿ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ನೀರು ಸೋಕಿಸಬಾರದು. ನಂತರ ಇದನ್ನು ವಡೆಯಂತೆ ತಟ್ಟಿ ಬಿಸಿಲಿನಲ್ಲಿ ಒಣಗಿಸಬೇಕು. ಚೆನ್ನಾಗಿ ಒಣಗಿದ ನಂತರ ತೆಗೆದಿಟ್ಟುಕೊಳ್ಳಬೇಕು. ಊಟದ ಸಮಯದಲ್ಲಿ ಎಣ್ಣೆಯಲ್ಲಿ ಕರಿದು ತಿಂದಲ್ಲಿ ರುಚಿಕರ.

ಕೊತ್ತಂಬರಿ ಸೊಪ್ಪಿನ ವಡೆ : 100 ಗ್ರಾಂ ಕೊತ್ತಂಬರಿ ಸೊಪ್ಪು, ಕಡಲೆಹಿಟ್ಟು ಒಂದು ಕಪ್, ಸಣ್ಣ ರವೆ ಒಂದು ಕಾಫ್, 25 ಗ್ರಾಂ ಜೀರಿಗೆ, ಒಂದು ಚಮಚೆ ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು ಎಣ್ಣೆ.
ಕಡಲೆಹಿಟ್ಟು, ರವೆ, ಜೀರಿಗೆ, ಖಾರದ ಪುಡಿ, ಉಪ್ಪು, ನೀರು ಸೇರಿಸಿ ಹದವಾಗಿ ಬೆರೆಸಿಕೊಳ್ಳಬೇಕು. ಅದಕ್ಕೆ ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು ಬೆರೆಸಬೇಕು. ವಡೆಯಂತೆ ತಟ್ಟಿ ಎಣ್ಣೆಯಲ್ಲಿ ಕರಿದುಕೊಂಡಲ್ಲಿ ರುಚಿಕರ ಒಡೆಸಿದ್ದ.

ಕೊತ್ತಂಬರಿ ಸೊಪ್ಪಿನ ದೋಸೆ : ಕೊತ್ತಂಬರಿ ಸೊಪ್ಪು ದೊಡ್ಡ ಕಟ್ಟು ಇದ್ದರೆ ಒಂದು ಮಧ್ಯಮ ಗಾತ್ರವಿದ್ದರೆ ಮೂರು,ಚಿಕ್ಕದಾದರೆ ಆರು ಕಟ್ಟು ತೊಗರಿಬೇಳೆ ಅರ್ಧ ಕೆ.ಜಿ.ಈರುಳ್ಳಿ ದೊಡ್ಡದಾದರೆ ಎರಡು ಚಿಕ್ಕದಾದರೆ ನಾಲ್ಕು ಹಸಿಮೆಣಸಿನಕಾಯಿ ಆರ ರಿಂದ ಎಂಟು ಸಣ್ಣ ರವೇ ಚಿರೋಟಿ 150 ಗ್ರಾಂ, ಜೀರಿಗೆ ಒಂದು ಚಮಚೆ, ಉಪ್ಪು ರುಚಿಗೆ ತಕ್ಕಷ್ಟು ಹುಳಿ ಮೊಸರು ಸ್ವಲ್ಪ.
ತೊಗರಿಬೇಳೆಯನ್ನು ಅರ್ಧ ಗಂಟೆ ಅಥವಾ ಒಂದು ಗಂಟೆ ನೀರಿನಲ್ಲಿ ನೆಲೆಸಬೇಕು. ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಬೇಕು. ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ನಂತರ ರವೆ, ಜೀರಿಗೆ,ಈರುಳ್ಳಿ, ಮಿಶ್ರ ಮಾಡಬೇಕು. ಅರ್ಧ ಗಂಟೆಯ ನಂತರ ದೋಸೆ ಹುಯ್ಯಬೇಕು. ಈ ಕೋತಂಬರಿ ದೋಸೆಗೆ ಬಿಸಿಯಾಗಿರುವಾಗಲೇ ತುಪ್ಪ ಹಾಕಿ ತಿಂದಲ್ಲಿ ಚಟ್ನಿಯೂ ಬೇಕಾಗಿಲ್ಲ.

*ಕೊತ್ತಂಬರಿ ಸೊಪ್ಪಿನ ಹಪ್ಪಳ : ಅಕ್ಕಿಹಿಟ್ಟು ಒಂದು ಕಪ್ ಕೊತ್ತಂಬರಿ ಸೊಪ್ಪು ಎರಡು ಕಟ್ಟು, ಅರಿಶಿನ ಅರ್ಧ ಚಮಚೆ, ಉಪ್ಪು ಅಗತ್ಯವಿದಷ್ಟು, ಅಡಿಗೆ ಸೋಡಾ ಒಂದು ಚಿಟಿಕೆ, ಜೀರಿಗೆ ಎರಡು ಚಮಚೆ.
ಒಂದು ಪಾತ್ರೆಯಲ್ಲಿ ಎರಡು ಕಪ್ ನೀರು ಹಾಕಿ ಒಲೆಯ ಮೇಲಿಟ್ಟು ಕುದಿ ಬಂದಾಗ, ಅಕ್ಕಿ ಹಿಟ್ಟು ಹಾಕಿ ತಿರುವಬೇಕು. ತೊಳೆದು ಸ್ವಚ್ಛಗೊಳಿಸಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಉಪ್ಪು, ಅಡಿಗೆ ಸೋಡಾ,ಜೀರಿಗೆ ಎಲ್ಲವನ್ನು ಬೆರೆಸಿ ಚಿಕ್ಕ ಚಿಕ್ಕ ಗಾತ್ರದ ಉಂಡೆ ಮಾಡಿಕೊಂಡು ಲಟ್ಟಿಸಿ ಬಿಸಿಲಲ್ಲಿ ಒಣಗಿಸಿ ತೆಗೆದಿಟ್ಟುಕೊಳ್ಳಬೇಕು. ಊಟದ ಜೊತೆಗೆ ಕರಿದು ತಿಂದಲ್ಲಿ ಬಲು ರುಚಿಕರ.