ಮನೆ ಆರೋಗ್ಯ ಕರ್ನಾಟಕದಲ್ಲಿ ಮತ್ತೆ ಕೊರೊನಾ ಆತಂಕ: ಮೇ ತಿಂಗಳಲ್ಲಿ 33 ಹೊಸ ಪ್ರಕರಣಗಳು ದೃಢ

ಕರ್ನಾಟಕದಲ್ಲಿ ಮತ್ತೆ ಕೊರೊನಾ ಆತಂಕ: ಮೇ ತಿಂಗಳಲ್ಲಿ 33 ಹೊಸ ಪ್ರಕರಣಗಳು ದೃಢ

0

ಬೆಂಗಳೂರು: ಕೊರೊನಾ ವೈರಸ್ ಭೀತಿಗೆ ಇನ್ನೂ ಅಂತ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುವಂತಾಗಿದೆ. ಕರ್ನಾಟಕದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಮತ್ತೆ ಏರಿಕೆ ಕಾಣುತ್ತಿದ್ದು, ಸಾರ್ವಜನಿಕರಲ್ಲಿ ಚಿಂತೆ ಹುಟ್ಟಿಸಿವೆ. ಈ ಬಾರಿಕೊರೊನಾ ವೈರಸ್​​ನ ಹೊಸ ತಳಿ ಜೆಎನ್.1 ಆತಂಕ ಹುಟ್ಟಿಸುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಂಗಾಪುರ ಮತ್ತು ಹಾಂಕಾಂಗ್‌ಗಳಲ್ಲಿ ಆತಂಕ ಮೂಡಿಸಿದ ಈ ತಳಿ, ಈಗ ಕರ್ನಾಟಕದಲ್ಲೂ ನಿಧಾನಕೆ ಏರುಗತಿಯಲ್ಲಿ ಸಾಗುತ್ತಿದೆ. ಸರಕಾರ ನೀಡಿದ ಮಾಹಿತಿ ಪ್ರಕಾರ, ಮೇ ತಿಂಗಳಲ್ಲಿ ಈ ಸಂಖ್ಯೆ ಗಂಭೀರವಾಗಿ ಏರಿಕೆಯಾಗಿದೆ. ಈಗಾಗಲೇ 33 ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ 9 ತಿಂಗಳ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವನ್ನು ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಸದ್ಯ 16 ಸಕ್ರಿಯ ಪ್ರಕರಣಗಳಿವೆ.

ಭಾರತದಲ್ಲಿ ಸದ್ಯ ಸಕ್ರಿಯ ಕೊವಿಡ್ ಕೇಸ್‌ಗಳ ಸಂಖ್ಯೆ 257 ಇದೆ. ಈ ಪೈಕಿ ಬಹುತೇಕ ಸೋಂಕಿತರು ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಹೀಗಾಗಿ ಆತಂಕ ಬೇಡ, ಎಚ್ಚರವಿರಲಿ ಸಾಕು ಎಂದು ಕೇಂದ್ರ ಆರೋಗ್ಯ ಇಲಾಖೆ ಸಲಹೆ ನೀಡಿದೆ. ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ ಇನ್‌ಫ್ಲುಯೆಂಜಾ ಮಾದರಿ ಅನಾರೋಗ್ಯ ಮತ್ತು ತೀವ್ರವಾದ ಉಸಿರಾಟದ ಸೋಂಕುಗಳ ಪ್ರಕರಣಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.

ಕೊರೊನಾ ಕೇಸ್‌ಗಳು ಪತ್ತೆಯಾಗ್ತಿದ್ದರೂ, ಸಾಂಕ್ರಾಮಿಕ ಎಂಬ ಮಟ್ಟದಲ್ಲಿ ಹರಡುತ್ತಿಲ್ಲ. ಹೀಗಾಗಿ ಆತಂಕ ಬೇಡ. ಜನಜಂಗುಳಿ ಪ್ರದೇಶಗಳಲ್ಲಿ ಓಡಾಡುವಾಗ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಿ, ಹ್ಯಾಂಡ್‌ ಸ್ಯಾನಿಟೈಸ್‌ ಮಾಡಿಕೊಳ್ಳುವುದು ಉತ್ತಮ ಎಂದು ಕೆ.ಸಿ.ಜನರಲ್ ಆಸ್ಪತ್ರೆಯ ಡಾ.ಮೋಹನ್ ಸಲಹೆ ನೀಡಿದ್ದಾರೆ.