ನವದೆಹಲಿ(Newdelhi): ಚೀನಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೊರೋನಾ ವೈರಸ್ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಕೋವಿಡ್ ಸಂಬಂಧಿತ ಪರಿಸ್ಥಿತಿಯನ್ನು ಪರಾಮರ್ಶಿಸಲು ಮತ್ತು ಅದಕ್ಕೆ ಸಂಬಂಧಪಟ್ಟ ವಿಷಯಗಳ ಕುರಿತು ಚರ್ಚಿಸಲು ಇಂದು ಅಪರಾಹ್ನ ಉನ್ನತ ಮಟ್ಟದ ಸಭೆ ಕರೆದಿದ್ದಾರೆ
ದೇಶದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ತಜ್ಞರ ಸಭೆಯ ನಂತರ ಚೀನಾ ಸೇರಿದಂತೆ ಇತರ ದೇಶಗಳಿಂದ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಮತ್ತೆ ಕೋವಿಡ್ ಪರೀಕ್ಷೆಗೆ ಕೇಂದ್ರ ಆರೋಗ್ಯ ಇಲಾಖೆ ಆದೇಶ ನೀಡಿದೆ.
ಚೀನಾದಲ್ಲಿ ಕೋವಿಡ್ ಉಲ್ಬಣಕ್ಕೆ ಕಾರಣವಾಗುವ ಓಮಿಕ್ರಾನ್ ಉಪ ರೂಪಾಂತರಿ ವೈರಸ್ ನ ಕನಿಷ್ಠ ಮೂರು ಪ್ರಕರಣಗಳು ಭಾರತದಲ್ಲಿ ವರದಿಯಾಗಿರುವುದರಿಂದ ಅದನ್ನು ಎದುರಿಸಲು ಕ್ರಮಗಳ ಸರಣಿಯನ್ನು ಘೋಷಿಸಲಾಗಿದೆ.
ಚೀನಾದ ಹೊರತಾಗಿ, ಬಿಎಫ್.7 ಈಗಾಗಲೇ ಅಮೆರಿಕ, ಇಂಗ್ಲೆಂಡ್ ಮತ್ತು ಯುರೋಪಿಯನ್ ಯೂನಿಯನ್, ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಮತ್ತು ಡೆನ್ಮಾರ್ಕ್’ನಂತಹ ದೇಶಗಳನ್ನು ತಲುಪಿದೆ. ಹೊಸ ರೂಪಾಂತರಗಳನ್ನು ಪತ್ತೆಹಚ್ಚಲು ಅನುಕೂಲವಾಗುವಂತೆ INSACOG ಲ್ಯಾಬ್’ಗಳಿಗೆ ಎಲ್ಲಾ ಕೋವಿಡ್ -19 ಪ್ರಕರಣಗಳ ಮಾದರಿಗಳನ್ನು ಪ್ರತಿದಿನ ಕಳುಹಿಸುವಂತೆ ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದ್ದಾರೆ.