ಮೈಸೂರು(Mysuru): ಮಹಾನಗರಪಾಲಿಕೆಯ 2023–24ನೇ ಸಾಲಿನ ಬಜೆಟ್ ತಯಾರಿಗಾಗಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮುಖಂಡರ ಅಭಿಪ್ರಾಯಗಳನ್ನು ಆಲಿಸಲಾಯಿತು.
ಹೋದ ವರ್ಷ ನೀಡಿದ್ದ ಸಲಹೆಗಳನ್ನು ಅನುಷ್ಠಾನಕ್ಕೆ ತರದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಮೇಯರ್’ಗಳು, ಪಾಲಿಕೆಯು ಮತ್ತಷ್ಟು ಜನಸ್ನೇಹಿ ಹಾಗೂ ಕ್ರಿಯಾಶೀಲವಾಗಬೇಕು ಎಂದು ಬಯಸಿದರು.
ಆದಾಯ ಹೆಚ್ಚಿಸಿಕೊಳ್ಳಲು ಲಭ್ಯವಿರುವ ದಾರಿಗಳನ್ನೂ ತೋರಿಸಿದರು.
ಹೊಸ ಹಾಗೂ ರೆವಿನ್ಯೂ ಬಡಾವಣೆಗಳಲ್ಲಿ ತೆರಿಗೆಯನ್ನು ಸಮರ್ಪಕವಾಗಿ ವಸೂಲಿ ಮಾಡಿದರೆ ಅಭಿವೃದ್ಧಿ ಕಾಮಗಾರಿಗಳಿಗೆ ಅನುಕೂಲವಾಗುತ್ತದೆ. ಅಂತೆಯೇ ಉದ್ದಿಮೆ ಪರವಾನಗಿಯನ್ನೂ ವಸೂಲಿ ಮಾಡಬೇಕು. ಖಾತೆ, ಕಂದಾಯ ಹಾಗೂ ನಕ್ಷೆ ನೀಡಲು ವಿಳಂಬವಾಗಬಾರದು ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಒತ್ತಾಯಿಸಿದರು.
ಬಿಜೆಪಿ ಮುಖಂಡ ಎಸ್.ಸಂದೇಶ್‌ಸ್ವಾಮಿ ಮಾತನಾಡಿ, ನಿಯಮದಲ್ಲಿದೆ ಎಂಬ ಕಾರಣಕ್ಕೆ ಸಭೆ ನಡೆಸಿದರೆ ಪ್ರಯೋಜನವಾಗದು. ಅವುಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿ ಬಜೆಟ್‌ನಲ್ಲೂ ಕೆಲವು ಹೊಸ ಯೋಜನೆ ಸೇರಿಸುತ್ತೀರಿ. ಅವು ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತೆರಿಗೆ ಕಟ್ಟಿಸಿಕೊಳ್ಳಲು ಆನ್‌ಲೈನ್ ವ್ಯವಸ್ಥೆ ಮಾಡಿದ್ದೀರಿ. ಆದರೆ, ಸರ್ವರ್ ಸಮಸ್ಯೆ ಇದೆ. ಈ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ಯಾರದು? ನಿವೃತ್ತ ಅಧಿಕಾರಿಯೊಬ್ಬರು ಖಾತೆ ವರ್ಗಾವಣೆಗೆ ಹೋದಾಗ, ಅವರನ್ನು ಅಲೆಸಲಾಗಿದೆ. 36 ಕಾರಣ ಹೇಳಲಾಗಿದೆ. ಅದನ್ನೆಲ್ಲಾ ಪಟ್ಟಿ ಮಾಡಿ, ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಮುಖಂಡ ಬಿ.ಕೆ.ಪ್ರಕಾಶ್ ಮಾತನಾಡಿ, ಖರ್ಚು ಜಾಸ್ತಿ ಮಾಡುತ್ತಿರುವುದು ಹಾಗೂ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಇರುವುದು ಪಾಲಿಕೆಗೆ ಹಣಕಾಸಿನ ಪರಿಸ್ಥಿತಿ ಸುಧಾರಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ರಸ್ತೆಗಳ ಗುಂಡಿ ಮುಚ್ಚುವುದನ್ನು ವ್ಯವಸ್ಥಿತವಾಗಿ ನಡೆಸಬೇಕು. ನಗರವನ್ನು ಟೂರಿಸಂ ಹಬ್ ಆಗಿಸಬೇಕು. ಹೆಚ್ಚಿನ ಅನುದಾನಕ್ಕಾಗಿ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಬೇಕು. ಸ್ಮಶಾನಗಳು, ಮಾರುಕಟ್ಟೆಗಳ ನಿರ್ವಹಣೆಗೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು.
ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಹೋದ ವರ್ಷ ಬಂದಿದ್ದ ಸಲಹೆಗಳಲ್ಲಿ ಕೆಲವನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಪೌರಕಾರ್ಮಿಕರಿಗಾಗಿ 15 ಕಡೆಗಳಲ್ಲಿ ವಿಶ್ರಾಂತಿ ಗೃಹ ಮಾಡುತ್ತಿದ್ದೇವೆ. 10 ಸಿದ್ಧಗೊಂಡಿದ್ದು, ಬಳಕೆಯಾಗುತ್ತಿವೆ. ಐದು ಕಡೆಗಳಲ್ಲಿ ನಿರ್ಮಾಣ ಹಂತದಲ್ಲಿವೆ. ಈ ವರ್ಷವೂ 15 ಕಡೆಗಳಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದರು.
ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ 195 ಆಟೊರಿಕ್ಷಾಗಳು ಹಾಗೂ ವಾರ್ಡ್’ಗೊಂದು ಟ್ರ್ಯಾಕ್ಟರ್’ಗಳನ್ನು ಹೋದ ವರ್ಷ ಕೊಡಲಾಗಿದೆ. ಡಿ.ದೇವರಾಜ ಅರಸು ರಸ್ತೆಯಲ್ಲಿ ಪಿಂಕ್ ಶೌಚಾಲಯ ನಿರ್ಮಿಸಲಾಗುತ್ತಿದ್ದು, ತಿಂಗಳಲ್ಲಿ ಸಿದ್ಧವಾಗಲಿದೆ. ತ್ಯಾಜ್ಯ ವಿಲೇವಾರಿಯಲ್ಲಿ ವಿಳಂಬವಾಗಿದ್ದರೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಮೇಯರ್ ಶಿವಕುಮಾರ್ ಮಾತನಾಡಿ, ಸಲಹೆಗಳು ವ್ಯರ್ಥವಾಗದಂತೆ ನೋಡಿಕೊಳ್ಳಲಿದ್ದೇನೆ. ಸಿಎ ನಿವೇಶನಗಳನ್ನು ಮುಡಾದಿಂದ ಪಡೆದುಕೊಳ್ಳಲಾಗುವುದು. ಕಟ್ಟಡ ನಿರ್ಮಾಣ ತ್ಯಾಜ್ಯ (ಡೆಬ್ರಿಸ್) ಮರುಬಳಕೆ ಘಟಕ ನಿರ್ಮಾಣ ಯೋಜನೆಗೆ ಮರು ಚಾಲನೆ ಕೊಡಲಾಗುವುದು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು. ಸ್ಮಶಾನಗಳ ನಿರ್ವಹಣೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಮಾಜಿ ಉಪಮೇಯರ್ ಮಹದೇವಮ್ಮ, ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಉದಯ್‌ಕುಮಾರ್ ಮಾತನಾಡಿದರು. ಉಪ ಮೇಯರ್ ಡಾ.ರೂಪಾ ಯೋಗೇಶ್, ಆಡಳಿತ ಪಕ್ಷದ ನಾಯಕಿ ಅಶ್ವಿನಿ ಅನಂತು, ವಿರೋಧಪಕ್ಷದ ನಾಯಕ ಅಯೂಬ್ ಖಾನ್ ಹಾಗೂ ಅಧಿಕಾರಿಗಳು ಇದ್ದರು.