ನವದೆಹಲಿ: ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದೇ ಸಿಬಿಐನ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ತಿಳಿಸಿದ್ದಾರೆ.
ಕೇಂದ್ರೀಯ ತನಿಖಾ ದಳದ ವಜ್ರ ಮಹೋತ್ಸವ ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಮತ್ತು ನ್ಯಾಯಕ್ಕೆ ಭ್ರಷ್ಟಾಚಾರವು ಅತಿ ದೊಡ್ಡ ತೊಡಕಾಗಿದೆ. ಭ್ರಷ್ಟಾಚಾರ ವಿರುದ್ಧ ಹೋರಾಡುವ ರಾಜಕೀಯ ಇಚ್ಛಾಶಕ್ತಿ ಎಂದಿಗೂ ಕುಗ್ಗುವುದಿಲ್ಲ. ಯಾವ ಭ್ರಷ್ಟರನ್ನು ಸುಮ್ಮನೆ ಬಿಡಬಾರದು ಎಂಬುದು ದೇಶ ಮತ್ತು ಅದರ ನಾಗರಿಕರ ಆಶಯವಾಗಿದೆ ಎಂದು ಒತ್ತಿ ಹೇಳಿದರು.
ಭ್ರಷ್ಟಾಚಾರ ಚಿಕ್ಕದಾದ ಅಪರಾಧವಲ್ಲ. ಬಡವರ ಹಕ್ಕುಗಳನ್ನು ಕಸಿದುಕೊಳ್ಳತ್ತಿದ್ದು, ಅನೇಕ ಅಪರಾಧಿಗಳ ಹುಟ್ಟಿಗೆ ಕಾರಣವಾಗುತ್ತದೆ ಎಂದು ಹೇಳಿದರು.
ಕಪ್ಪು ಹಣ ಹಾಗೂ ಬೇನಾಮಿ ಆಸ್ತಿಯ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಭ್ರಷ್ಟರ ಹೊರತಾಗಿ ಭ್ರಷ್ಟಾಚಾರದ ಕಾರಣಗಳ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಹೇಳಿದರು.
ವೃತ್ತಿಪರ ಹಾಗೂ ದಕ್ಷ ಸಂಸ್ಥೆಗಳ ಹೊರತಾಗಿ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣ ಅಸಾಧ್ಯ. ಈ ನಿಟ್ಟಿನಲ್ಲಿ ಸಿಬಿಐಗೆ ಮಹತ್ತರ ಜವಾಬ್ದಾರಿ ಇದೆ ಎಂದು ಹೇಳಿದರು.
ಇಂದಿಗೂ ಇತ್ಯರ್ಥವಾಗದ ಹಲವು ಪ್ರಕರಣಗಳು ಸಿಬಿಐ ವಹಿಸಬೇಕೆಂಬ ಬೇಡಿಕೆಗಳಿವೆ ಎಂದು ಅವರು ಉಲ್ಲೇಖ ಮಾಡಿದರು.
ಕೇಂದ್ರಿಯ ತನಿಖಾ ದಳವು (ಸಿಬಿಐ) ಈಗ ನ್ಯಾಯದ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಅದು ಸಾಮಾನ್ಯ ನಾಗರಿಕರಿಗೆ ಹೊಸ ಭರವಸೆ ಹಾಗೂ ಧೈರ್ಯವನ್ನು ನೀಡಿದೆ. ಸಿಬಿಐನಂತಹ ವೃತ್ತಿಪರ ಹಾಗೂ ದಕ್ಷ ಸಂಸ್ಥೆ ಇಲ್ಲದಿದ್ದರೆ ಭಾರತ ಮುಂದೆ ಸಾಗಲು ಸಾಧ್ಯವಿಲ್ಲ. ಬ್ಯಾಂಕ್ ಮೋಸದಿಂದ ಹಿಡಿದು ಅರಣ್ಯ ಜೀವಿ ವಂಚನೆವರೆಗೂ, ಸಿಬಿಐನ ಕೆಲಸದ ವ್ಯಾಪ್ತಿ ಹಲವು ಪಟ್ಟು ಹೆಚ್ಚಾಗಿದೆ. ಆದರೆ ದೇಶವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸುವುದು ಸಿಬಿಐನ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.
ಆರು ದಶಗಳಲ್ಲಿ ಸಿಬಿಐ, ಬಹು ಆಯಾಮದ, ಬಹು ಶಿಸ್ತೀಯ ತನಿಖಾ ಸಂಸ್ಥೆ ಎಂದು ಗುರುತಿಸಿಕೊಂಡಿದೆ ಎಂದು ಪ್ರಧಾನಿ ಶ್ಲಾಘಿಸಿದರು.