ಮೈಸೂರು(Mysuru): ಮೈಸೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ತಾಂಡವವಾಡುತ್ತಿದ್ದು, ಆಡಿಟ್ ವರದಿಗೆ ಒಂದು ಗ್ರಾಮ ಪಂಚಾಯಿತಿಯಿಂದ 50 ರಿಂದ 70 ಸಾವಿರದವರೆಗೆ ಲಂಚವನ್ನು ಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮೈಸೂರು ಜಿಲ್ಲಾ ವ್ಯಾಪ್ತಿಗೆ ಬರುವ ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ಗ್ರಾಮ ಪಂಚಾಯಿತಿ, ಮುಜರಾಯಿ ಆಡಿಟ್ ಅನ್ನು ಸರ್ಕಾರದ ಲೋಕಲ್ ಆಡಿಟ್ ಸರ್ಕಲ್ ಎಂಬ ಸಂಸ್ಥೆ ಮಾಡುತ್ತದೆ. ಆದರೆ ಗಂಭೀರ ವಿಷಯವೆಂದರೆ ಈ ಸಂಸ್ಥೆಯಲ್ಲಿ ಸಿಎ (Chartered Accountant) ಮಾಡಿರುವ ನುರಿತ ಸಿಬ್ಬಂದಿ ಇಲ್ಲ. ಅಲ್ಲದೇ ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಲಂಚಕ್ಕೆ ಕೈಯೊಡ್ಡುತ್ತಿದ್ದು ಹಲವು ಅಕ್ರಮ ವ್ಯವಹಾರಗಳಿಗೆ ಕಾರಣವಾಗಿದೆ.
ಮೈಸೂರು ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಲೋಕಲ್ ಆಡಿಟ್ ಸರ್ಕಲ್ ನ ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ ಭ್ರಷ್ಟಚಾರ ನಡೆಸಿ, ಲಂಚ ನೀಡಿ, ತಮ್ಮ ಗ್ರಾಮ ಪಂಚಾಯಿತಿಯ ಲೆಕ್ಕಪತ್ರ/ಬಿಲ್ ಗಳಲ್ಲಿ ಇರಬಹುದಾದ ನ್ಯೂನತೆಗಳನ್ನು ಸರಿಪಡಿಸಿಕೊಂಡು ಅಕ್ರಮ ಎಸಗಿರುವುದು ಮತ್ತು ಆ ಪ್ರಕಾರವಾಗಿ ಬಳಸಲ್ಪಟ್ಟ ಅನುದಾನವು ಕ್ರಮಬದ್ಧವಾಗಿದೆ ಎಂಬ ರೀತಿಯಲ್ಲಿ ಆಡಿಟ್ ವರದಿ ತರಿಸಿಕೊಂಡಿರುವ ಮಾಹಿತಿ ಇದೆ.
ಹಣ ನೀಡದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತದೆ ಮತ್ತು ಸರ್ಕಾರದ ಹಣ ದುರ್ಬಳಕೆಯಾಗಿರುವಂತೆ ಆಡಿಟ್ ನಲ್ಲಿ ತೋರಿಸುತ್ತಾರೆ. ಇದರಿಂದಾಗಿ ಅನಿವಾರ್ಯವಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಲೋಕಲ್ ಆಡಿಟ್ ಸರ್ಕಲ್ ನ ಅಧಿಕಾರಿಗಳಿಗೆ ಹಣ ನೀಡಬೇಕಾದ ಪರಿಸ್ಥಿತಿ ಇದೆ. ಇಂತಹ ಭ್ರಷ್ಟ ಅಧಿಕಾರಿಗಳಿಂದಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ತೊಂದರೆ ಅನುಭವಿಸುವಂತಾಗಿದೆ.
ಒಬ್ಬ ನುರಿತ ಸಿಎ ಪದವಿ ಪಡೆದ ಅಧಿಕಾರಿಯನ್ನು ಸಂಸ್ಥೆಗೆ ನೇಮಿಸಲು ಸರ್ಕಾರಕ್ಕೆ ಹಾಗೂ ಉನ್ನತ ಅಧಿಕಾರಿಗಳಿಗೆ ಸಾಧ್ಯವಾಗದೇ ಇರುವುದು ಕೂಡ ಈ ಭ್ರಷ್ಟಚಾರಕ್ಕೆ ಕಾರಣ ಎಂದು ಹೇಳಿದರೆ ತಪ್ಪಾಗಲಾರದು.
ಇಂತಹ ಭ್ರಷ್ಟಚಾರ, ಸರ್ಕಾರದ ಸಂಸ್ಥೆಯಿಂದಲೇ ನಡೆಯುತ್ತಿದ್ದರೂ ಅಧಿಕಾರಿಗಳು ಕಂಡರೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ದೂರು ದಾಖಲು:
ಈ ಭ್ರಷ್ಟಚಾರದ ಮಾಹಿತಿ ದೊರೆತ ಸಾಮಾಜಿಕ ಹೋರಾಟಗಾರ ಎಂ.ರವೀಂದ್ರ ಮೈಸೂರು ಜಿಲ್ಲಾ ವ್ಯಾಪ್ತಿಯ ಗೋಪಾಲಪುರ, ಇಲವಾಲ, ಧನಗಳ್ಳಿ ಹಾಗೂ ಬೀರಿಹುಂಡಿ ಗ್ರಾಮ ಪಂಚಾಯಿತಿಗಳ ಬಗ್ಗೆ ಆಡಿಟರ್ ಜನರಲ್ ಕಚೇರಿಯಲ್ಲಿ ಆಡಿಟ್ ಮಾಡಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಆರ್.ಪೂರ್ಣಿಮಾ ಅವರಿಗೆ ದೂರು ಸಲ್ಲಿಸಿದ್ದಾರೆ.
ಈ ನಾಲ್ಕು ಗ್ರಾಮ ಪಂಚಾಯಿತಿಗಳ 2021-22ನೇ ಸಾಲಿನ ಆಡಿಟ್ ಅನ್ನು ಆಡಿಟರ್ ಜನರಲ್ ಅವರ ಕಚೇರಿಯಿಂದ ಮಾಡಿಸಬೇಕು. ಹಾಗೂ ಅಕ್ರಮದಲ್ಲಿ ಭಾಗಿಯಾಗಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ POCA ಅಡಿಯಲ್ಲಿ ದೂರು ದಾಖಲಿಸಿ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.