ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ.
ಸತತ 8ನೇ ಬಜೆಟ್ ಮಂಡನೆಗೆ ಸಜ್ಜಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮಧುಬನಿ ಕಲೆ ಇರುವ ಸೀರೆಯನ್ನು ಧರಿಸಿ ಸಂಸತ್ ಭವನದತ್ತ ಹೆಜ್ಜೆ ಇಟ್ಟಿದ್ದಾರೆ.
ಆ ಮೂಲಕ ಅವರು ಮಧುಬನಿ ಕಲೆ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
ನಿರ್ಮಲಾ ಅವರು ಇತ್ತೀಚೆಗೆ ಮಿಥಿಲಾ ಆರ್ಟ್ ಇನ್ಸ್ಟಿಟ್ಯೂಟ್ಗೆ ಹೋಗಿದ್ದಾಗ, ದುಲಾರಿ ದೇವಿ ಅವರನ್ನು ಭೇಟಿಯಾಗಿದ್ದರು. ಬಿಹಾರದಲ್ಲಿ ಮಧುಬನಿ ಕಲೆಯ ಕುರಿತು ಆತ್ಮೀಯವಾಗಿ ಮಾತುಕತೆ ನಡೆಸಿದ್ದರು. ಇದೇ ವೇಳೆ ದುಲಾರಿ ದೇವಿ ಅವರು ಸಚಿವೆಗೆ ಸೀರೆಯನ್ನು ನೀಡಿ, ಬಜೆಟ್ ದಿನ ಅದನ್ನು ಧರಿಸುವಂತೆ ಮನವಿ ಮಾಡಿದ್ದರು.
ಕೆನೆ ಬಣ್ಣ, ಚಿನ್ನ ವರ್ಣದ ಅಂಚು ಹೊಂದಿರುವ ಈ ಸೀರೆಯ ಮೇಲೆ ಮಧುಬನಿ ಕಲೆಯ ಚಿತ್ತಾರವಿದೆ.
ದುಲಾರಿ ದೇವಿ ಅವರಿಗೆ 2021ರಲ್ಲಿ ಪದ್ಮಶ್ರೀ ಗೌರವ ನೀಡಲಾಗಿದೆ.














