ಬೆಂಗಳೂರು: ಭಾರತೀಯರ ಶುಭ ಹಾರೈಕೆ ಹಾಗೂ ಪ್ರಾರ್ಥನೆಯೊಂದಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಚಂದ್ರಯಾನ-3 ನೌಕೆ ಬುಧವಾರ ಸಂಜೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಜ್ಜಾಗಿದ್ದು, ಈ ಐತಿಹಾಸಿಕ ಸಂದರ್ಭಕ್ಕೆ ಕ್ಷಣಗಣನೆ ಆರಂಭವಾಗಿದೆ.
ಈ ಕೌತುಕದ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕೆ ಇಡೀ ಜಗತ್ತು ಭಾರತದತ್ತ ಕಣ್ಣರಳಸಿ ಕೂತಿದೆ. ಬುಧವಾರ ಸಂಜೆ ಸುಮಾರು 6.04ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ.
ಚಂದ್ರಯಾನ-3ರ ಯಶಸ್ಸಿಗಾಗಿ ಭಾರತ ಸೇರಿದಂತೆ ವಿದೇಶಗಳಲ್ಲಿ ಹೋಮ, ಹವನ ಮಾಡಲಾಗುತ್ತಿದೆ.
ಅಮೆರಿಕಾದ ವರ್ಜಿನಿಯಾದಲ್ಲಿ ನೂರಾರು ಭಾರತೀಯರು ದೇವಾಲಯದಲ್ಲಿ ಚಂದ್ರಯಾನ-3ರ ಯಶಸ್ಸಿಗೆ ಹವನ ಮಾಡಿದ್ದಾರೆ. ಹಾಗೇ ದೇಶದ ಹಲವು ಭಾಗಗಳಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಬುಧವಾರ ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್
ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಮಯ ನಿಗದಿ ಮಾಡಲಾಗಿದೆ. ಚಂದ್ರನ ಮೇಲೆ ಸೂರ್ಯನ ಕಿರಣಗಳು ಬಿದ್ದ ಬಳಿಕವಷ್ಟೇ ಲ್ಯಾಂಡಿಂಗ್ ಸಾಧ್ಯವಾಗಲಿದೆ.
ಭೂಮಿಯಿಂದ 3.84 ಲಕ್ಷ ಕಿಲೋ ಮೀಟರ್ ದೂರ ಇರುವ ಚಂದ್ರನ ಸಮೀಪಕ್ಕೆ ತೆರಳಲು ವಿಕ್ರಮ್ ಲ್ಯಾಂಡರ್ 45 ದಿನಗಳ ಪ್ರಯಾಣ ಮಾಡಿದೆ. ಸದ್ಯ ವಿಕ್ರಮ್ ಲ್ಯಾಂಡರ್ ಚಂದ್ರನಿಂದ 25 ಕಿ.ಮೀ ಎತ್ತರದಲ್ಲಿ ನಿಂತಿದೆ.