ಮೈಸೂರು : ನಾಡಹಬ್ಬ ಮೈಸೂರು ದಸರಾ ಮೆರುಗು ಜೋರಾಗಿದ್ದು, ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ 58 ಸ್ತಬ್ಧಚಿತ್ರ ಸೇರಿ 150ಕ್ಕೂ ಕಲಾತಂಡಗಳು ಭಾಗಿಯಾಗಲಿವೆ.
ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ 58 ಟ್ಯಾಬ್ಲೋಗಳು ಸಾಗಲು ಸಿದ್ಧಗೊಂಡಿವೆ. 31 ಜಿಲ್ಲೆಗಳು ಹಾಗೂ ವಿವಿಧ ಇಲಾಖೆಗಳು ಸೇರಿದಂತೆ 58 ಟ್ಯಾಬ್ಲೋಗಳು ಅಂಬಾವಿಲಾಸ ಅರಮನೆಯ ಆವರಣದಲ್ಲಿ ಸಿದ್ಧಗೊಂಡಿವೆ. ಈ ಮೂಲಕ ತಮ್ಮ ಸ್ಥಳೀಯ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಯೋಜನೆಗಳು ಸೇರಿದಂತೆ ಹಲವು ಮಹತ್ವ ಸಾರಲಿವೆ.
ಎಲ್ಲಾ ಸ್ತಬ್ಧಚಿತ್ರಗಳು ಮೈಸೂರು ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿ ಸಿದ್ಧವಾಗಿ ನಿಂತಿವೆ. ಜೊತೆಗೆ ಮೆರವಣಿಗೆಯಲ್ಲಿ 150ಕ್ಕೂ ಅಧಿಕ ಕಲಾತಂಡಗಳು ಪಾಲ್ಗೊಳ್ಳಲಿದ್ದು, ಜಂಬೂಸವಾರಿಯಲ್ಲಿ ಭಾಗಿಯಾಗಲು ಕಾತುರದಿಂದ ಕಾಯುತ್ತಿವೆ.
ಇನ್ನೂ ಜಂಬೂ ಸವಾರಿ ಹಿನ್ನೆಲೆ ಮೈಸೂರಿನಾದ್ಯಂತ ಬಿಗಿಭದ್ರತೆ ಮಾಡಿಕೊಳ್ಳಲಾಗಿದ್ದು, ವಿವಿಧ ಜಿಲ್ಲೆಗಳಿಂದ ಪೊಲೀಸ್ ಪಡೆ ಆಗಮಿಸಿದೆ. ನಗರದಾದ್ಯಂತ 9 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, ಚಿತ್ರದುರ್ಗ, ಚಿಕ್ಕಮಗಳೂರು, ಕೊಪ್ಪಳ, ಬೆಳಗಾವಿಯಿಂದ ಗರುಡ ಪಡೆ, ಶ್ವಾನದಳ, ಬಾಂಬ್ ಸ್ಕ್ವಾಡ್ ಆಗಮಿಸಿದೆ.
ಜೊತೆಗೆ ಜಂಬೂಸವಾರಿ ಸಾಗುವ ಮಾರ್ಗದ ಉದ್ದಕ್ಕೂ ಭಾರಿ ಬಿಗಿ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲಾಗಿದ್ದು, ಅರಮನೆ ಸುತ್ತಮುತ್ತ ಹಾಗೂ ಅಂಬಾರಿ ಸಾಗುವ ಮಾರ್ಗದಲ್ಲಿ ಹೆಚ್ಚುವರಿ ಸಿಸಿಟಿವಿ ನಿಯೋಜನೆ ಮಾಡಲಾಗಿದೆ. ಬನ್ನಿಮಂಟಪ ಸೇರಿದಂತೆ ರಾಜಮಾರ್ಗಗಳಲ್ಲಿ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ ಎಂದು ಹೇಳಲಾಗಿದೆ.















