ಶ್ರೀಹರಿಕೋಟಾ (ಆಂಧ್ರಪ್ರದೇಶ): ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಣ್ಣ ಉಪಗ್ರಹ ಉಡಾವಣಾ ವಾಹನ- ಡಿ3 (SSLV- D3) ರ ಮೂರನೇ ಮತ್ತು ಅಂತಿಮ ಅಭಿವೃದ್ಧಿಶೀಲ ರಾಕೆಟ್ ಮೂಲಕ ಭೂ ವೀಕ್ಷಣಾ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಮೊದಲ ಎಸ್ಎಸ್ಎಲ್ವಿ ಪ್ರಾಯೋಗಿಕ ಪ್ರಕ್ರಿಯೆಯಾಗಿ 2022ರ ಆಗಸ್ಟ್ನಲ್ಲಿ ಎಸ್ಎಸ್ಎಲ್ವಿ ಡಿ1 ಅನ್ನು ಉಡಾವಣೆ ಮಾಡಲಾಗಿತ್ತು. ಆದರೆ ದುರದೃಷ್ಟವಶಾತ್ ಅದು ಗುರಿಯನ್ನು ಸಾಧಿಸಿರಲಿಲ್ಲ. ಎರಡನೇ ಪ್ರಾಯೋಗಿಕ ಹಾರಾಟವನ್ನು 2023ರ ಫೆಬ್ರವರಿಯ 10ರಂದು ಮಾಡಲಾಗಿತ್ತು. ಇದು ಭೂ ವೀಕ್ಷಣಾ ಉಪಗ್ರಹ 07 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಇದರ ಮುಂದುವರೆದ ಭಾಗವಾಗಿ ಇದೀಗ SSLV-D3-EOS-08 ಮಿಷನ್ ಉಡಾವಣೆ ಮಾಡಲಾಗುತ್ತಿದೆ.
ಜನವರಿಯಲ್ಲಿ PSLV-C58/XpoSat ಮತ್ತು ಫೆಬ್ರವರಿಯಲ್ಲಿ GSLV-F14/INSAT-3DS ಮಿಷನ್‌ಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವ ಇಸ್ರೋಗೆ ಇದು 2024ರ ಮೂರನೇ ಮಿಷನ್ ಆಗಿದೆ. SSLV-D3-EOS-08 ಮಿಷನ್ ಉಡಾವಣೆಗೆ ಗುರುವಾರ ತಡರಾತ್ರಿ 2.47 ನಿಮಿಷಕ್ಕೆ ಸರಿಯಾಗಿ ಆರೂವರೆ ಗಂಟೆಗಳ ಕೌಂಟ್ಡೌನ್ ಪ್ರಾರಂಭಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ.
ಸುಮಾರು 34 ಮೀಟರ್ ಎತ್ತರವಿರುವ ಅತ್ಯಂತ ಚಿಕ್ಕ SSLV ರಾಕೆಟ್ ಅನ್ನು ಆಗಸ್ಟ್ 15ರಂದು ಬೆಳಗ್ಗೆ 9.17ಕ್ಕೆ ಉಡಾವಣೆ ಮಾಡಲು ಯೋಜಿಸಲಾಗಿತ್ತು. ಆದರೆ, ನಂತರ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಮೊದಲ ಉಡಾವಣಾ ಪ್ಯಾಡ್‌ನಿಂದ ಆಗಸ್ಟ್ 16ರಂದು ಬೆಳಗ್ಗೆ 9.17ಕ್ಕೆ ಮರುಹೊಂದಿಸಲಾಗಿದೆ.
ಉಪಗ್ರಹ ಉಡಾವಣೆಗೂ ಮುನ್ನ ಆಗಸ್ಟ್ 15ರಂದು ಇಸ್ರೋ ವಿಜ್ಞಾನಿಗಳು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.













