ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಬೆಳಗ್ಗೆ 10.15ರಿಂದ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ನಾದ ಬ್ರಹ್ಮ, ಸಂಗೀತ ನಿರ್ದೇಶಕ ಹಂಸಲೇಖ ಅವರು ದಸರಾಗೆ ಚಾಲನೆ ನೀಡಲಿದ್ದಾರೆ. ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಮಹದೇವಪ್ಪ, ಸಂಸದರು, ಶಾಸಕರು ಭಾಗಿಯಾಗಲಿದ್ದಾರೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಕಂಕಣಧಾರಣೆ ಮಾಡಲಾಗಿದ್ದು ಮುಂಜಾನೆ 5 ಗಂಟೆಯಿಂದ ಅರಮನೆಯಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳು ಆರಂಭವಾಗಿವೆ.
ಇಂದು ಬೆಳಗ್ಗೆ 11.30ಕ್ಕೆ ದಸರಾ ಚಲನಚಿತ್ರೋತ್ಸವಕ್ಕೆ ಕಲಾಮಂದಿರದಲ್ಲಿ ಸಚಿವ ಹೆಚ್.ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಬಳಿಕ ಮಧ್ಯಾಹ್ನ 12.30ಕ್ಕೆ ಕುಪ್ಪಣ್ಣ ಪಾರ್ಕ್‌ನಲ್ಲಿ ದಸರಾ ಫಲಪುಷ್ಪ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಚಿವ ಮುನಿಯಪ್ಪ ಅವರು ಭಾರತ ಸ್ಕೌಟ್ಸ್ ಌಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳ ಉದ್ಘಾಟಿಸಲಿದ್ದಾರೆ. ಸಂಜೆ 4 ಗಂಟೆಗೆ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸಿಎಂ ಸಿದ್ದರಾಮಯ್ಯನವರು ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಬಳಿಕ ಸಂಜೆ 4.30ಕ್ಕೆ ವಸ್ತು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಸಂಜೆ 5 ಗಂಟೆಗೆ ಸೆನೆಟ್ ಭವನದಲ್ಲಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಯೋಗ ದಸರಾ ಉದ್ಘಾಟನೆ ಮಾಡಲಿದ್ದಾರೆ.
ಕಲಾಮಂದಿರದಲ್ಲಿ ಸಂಜೆ 5 ಗಂಟೆಗೆ ಸಚಿವ ಶಿವರಾಜ್ ತಂಗಡಗಿ ಅವರು ಅಖಿಲ ಭಾರತ, ರಾಜ್ಯ ಮಟ್ಟದ ಚಿತ್ರ ಶಿಲ್ಪ ಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಬಳಿಕ ಓವಲ್ ಮೈದಾನದಲ್ಲಿ ದಸರಾ ಪುಸ್ತಕ ಮಾರಾಟ ಮೇಳ ಹಾಗೂ ಸಂಜೆ 5.30ಕ್ಕೆ ರಂಗಾಯಣದಲ್ಲಿ ನವರಾತ್ರಿ ರಂಗೋತ್ಸವ ಉದ್ಘಾಟನೆ ಮಾಡಲಿದ್ದಾರೆ. ಸಚಿವ ಜಾರ್ಜ್ ಸಂಜೆ 6.30ಕ್ಕೆ ವಿದ್ಯುತ್ ದೀಪಾಲಂಕಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ 7 ಗಂಟೆಗೆ ಸಿಎಂ ಸಿದ್ದರಾಮಯ್ಯ ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಲಿದ್ದಾರೆ.
ಇಂದಿನಿಂದ ಅ.24ರವರೆಗೆ ಮೈಸೂರು ದಸರಾ ಮಹೋತ್ಸವ ನಡೆಯಲಿದೆ. ಸುರಕ್ಷಿತ ಸುಗಮ ಸಂಪ್ರದಾಯಿಕ ದಸರಾ ಆಚರಣೆಗೆ ಮೈಸೂರು ನಗರ ಪೊಲೀಸ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಮೈಸೂರು ನಗರ ಪೊಲೀಸರ ಸಜ್ಜಾಗಿದ್ದು ದಸರಾ ಕಾರ್ಯಕ್ರಮಗಳು ನಡೆಯಲಿರುವ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮೈಸೂರು ನಗರ ಸೇರಿದಂತೆ ಇತರೆ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ. 1 ಡಿಐಜಿ, 11 ಎಸ್ ಪಿ, 410 ಪೊಲೀಸ್ ಅಧಿಕಾರಿಗಳು, 3778 ಪೊಲೀಸ್ ಸಿಬ್ಬಂದಿ, ಒಟ್ಟು 4200 ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ. ಸಶಸ್ತ್ರ ಪಡೆಗಳು, ವಿಧ್ವಂಸಕ ಕೃತ್ಯ ಪಡೆಗಳು, ಸ್ಫೋಟಕ ನಿಷ್ಕ್ರಿಯ ದಳ, ವಿಶೇಷ ಗರುಡ ಪಡೆ, ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ.