ಮನೆ ರಾಜಕೀಯ ದೇಶಕ್ಕೆ ಸಕಾರಾತ್ಮಕ ರಾಜಕಾರಣದ ಅಗತ್ಯವಿದೆ: ಸಿಎಂ ಬೊಮ್ಮಾಯಿ

ದೇಶಕ್ಕೆ ಸಕಾರಾತ್ಮಕ ರಾಜಕಾರಣದ ಅಗತ್ಯವಿದೆ: ಸಿಎಂ ಬೊಮ್ಮಾಯಿ

0

ಚಾಮರಾಜನಗರ(Chamarajanagara): ದೇಶಕ್ಕೆ ಸಕಾರಾತ್ಮಕ ರಾಜಕಾರಣದ ಅಗತ್ಯವಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ. ಪ್ರಜಾಪ್ರಭುತ್ವವೂ ಯಶಸ್ವಿಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಹೇಳಿದರು.

ನಗರದಲ್ಲಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,  ಜನಪ್ರಿಯ ಸರ್ಕಾರದಿಂದ ಜನರಿಗೆ ಏನೂ ಲಾಭವಿಲ್ಲ. ಜನೋಪಯೋಗಿ ಸರ್ಕಾರ ಬೇಕು. ಜನೋಪಯೋಗಿ ಶಾಸಕರು ಬೇಕು. ಜನೋಪಯೋಗಿ ಸಚಿವರು ಬೇಕು ಎಂದು ಹೇಳಿದರು.

ಸರ್ಕಾರ ಯಾವಾಗಲೂ ತಾನು ಮಾಡಿರುವ ಅಭಿವೃದ್ಧಿಯಿಂದ ಮತಗಳನ್ನು ಕೇಳಬೇಕು. ದೇಶದಲ್ಲೆಡೆ ಈ ಹಿಂದೆ ನಕಾರಾತ್ಮಕ ಪ್ರಜಾಪ್ರಭುತ್ವ ಇತ್ತು. ಒಂದು ಸರ್ಕಾರ ಬಂದ ಮೇಲೆ ಅದರ ತಪ್ಪುಗಳನ್ನು ಮುಂದಿಟ್ಟುಕೊಂಡು ಇನ್ನೊಂದು ಸರ್ಕಾರ ಮಾಡಲಾಗುತ್ತಿತ್ತು. ಅಂದರೆ ಇನ್ನೊಬ್ಬರ ವೈಫಲ್ಯಗಳ ಮೇಲೆ ಸರ್ಕಾರ ರಚನೆಯಾಗುತ್ತಿತ್ತು. ದೇಶದ ಎಲ್ಲ ರಾಜ್ಯಗಳಲ್ಲೂ ಇದೇ ರೀತಿ ನಡೆಯುತ್ತಿತ್ತು. ಇದರಿಂದ ಜನರಿಗೆ, ರಾಜ್ಯಕ್ಕೆ ದುಡಿಯುವ ವರ್ಗಕ್ಕೆ ಏನೂ ಅನುಕೂಲವಾಗುತ್ತಿರಲಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕ ರಾಜಕಾರಣ ಮಾಡುತ್ತಿದ್ದಾರೆ. ಯಾವುದು ಅಸಾಧ್ಯವೋ ಅದನ್ನು ಸವಾಲಾಗಿ ಸ್ವೀಕರಿಸಿ, ಅಂತಹ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸುತ್ತಿದೆ. ಜಲ ಜೀವನ್ ಮಿಷನ್‌ (ಜೆಜೆಎಂ) ಇದಕ್ಕೆಉದಾಹರಣೆ. ಮನೆ ಮನೆಗಳಿಗೆ ನೀರು ಕೊಡುವ ಯೋಜನೆಯನ್ನು ಇದುವರೆಗೆ ಯಾರೂ ಜಾರಿಗೆ ತಂದಿರಲಿಲ್ಲ. ಮೋದಿ ಅದನ್ನು ಜಾರಿಗೆ ತಂದಿದ್ದಾರೆ. ಕೆಂಪು ಕೋಟೆಯ ಮೇಲೆ ಭಾಷಣ ಮಾಡುವ ಸಂದರ್ಭದಲ್ಲಿ ದೇಶದ 20 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಘೋಷಿಸಿದರು. ಈಗಾಗಲೇ ಎಂಟು ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಒಂದೂವರೆ ವರ್ಷಗಳಲ್ಲಿ ಎಲ್ಲ 20 ಕೋಟಿ ಮನೆಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಬೊಮ್ಮಾಯಿ ಹೇಳಿದರು.

ನಮ್ಮ ರಾಜ್ಯದಲ್ಲಿ 75 ವರ್ಷಗಳಲ್ಲಿ 25 ಲಕ್ಷ ಮನೆಗಳಿಗೆ ಮಾತ್ರ ನೀರಿನ ಸೌಲಭ್ಯ ನೀಡಲಾಗಿತ್ತು. ಕೇವಲ ಒಂದೂವರೆ ವರ್ಷಗಳಲ್ಲಿ 30 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಸಲಾಗಿದೆ. ಪ್ರಸಕ್ತ ವರ್ಷ 25 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.

ಅಸಾಧ್ಯ ಎಂದುಕೊಂಡಿರುವುದನ್ನು ಜಾರಿಗೆ ತರಲು ಸಮಸ್ಯೆಗಳಿರುತ್ತವೆ. ಅವುಗಳನ್ನು ಎದುರಿಸಿ ಅನುಷ್ಠಾನಗೊಳಿಸಿದಾಗ ಜನರಿಗೆ ಅನುಕೂಲವಾಗುತ್ತದೆ ಎಂದರು.

ಚಾಮರಾಜನಗರಕ್ಕೆ ಬಂದರೆ ರಾಜಕೀಯ ಶಕ್ತಿ ವೃದ್ಧಿಯಾಗುತ್ತದೆಯೇ ವಿನಾ, ಕಡಿಮೆಯಾಗುವುದಿಲ್ಲ. ಜಿಲ್ಲೆಯ ಬಗ್ಗೆ ಅನಾವಶ್ಯಕವಾಗಿ ಮೌಢ್ಯವನ್ನು ಹರಡಲಾಗಿದೆ. ಇಲ್ಲಿನ ಜನ ಮುತ್ತಿನಂಥವರು. ಹೃದಯ ಶ್ರೀಮಂತಿಕೆ ಇರುವವರು. ಅವರನ್ನು ಭೇಟಿಯಾಗುವುದು ಶುಭಸೂಚಕ. ನೀವು ಕರೆದಾಗಲೆಲ್ಲ ನಾನು ಬರುತ್ತಿರುತ್ತೇನೆ ಎಂದು ಬೊಮ್ಮಾಯಿ ಹೇಳಿದರು.

ಹಿಂದಿನ ಲೇಖನಪ್ರತಿದಿನ ಕ್ಯಾರೆಟ್ ಸೇವಿಸುವುದು ದೃಷ್ಟಿಗೆ ಮಾತ್ರವಲ್ಲ, ಬಿಪಿ, ಹೃದ್ರೋಗಕ್ಕೂ ಒಳ್ಳೆಯದು
ಮುಂದಿನ ಲೇಖನಗ್ಯಾಂಗ್’ಸ್ಟರ್ ಆಗಿ ತೆರೆ ಮೇಲೆ ಬರಲು ಸಜ್ಜಾದ ರವಿಚಂದ್ರನ್ ಪುತ್ರ