ಮನೆ ರಾಜಕೀಯ ರಾಜಕೀಯಕ್ಕಿಂತಲೂ ದೇಶದ ಐಕ್ಯತೆ ಮುಖ್ಯ: ಆರ್.ಧ್ರುವನಾರಾಯಣ

ರಾಜಕೀಯಕ್ಕಿಂತಲೂ ದೇಶದ ಐಕ್ಯತೆ ಮುಖ್ಯ: ಆರ್.ಧ್ರುವನಾರಾಯಣ

0

ಮೈಸೂರು(Mysuru): ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಇದಲ್ಲ. ರಾಜಕೀಯಕ್ಕಿಂತಲೂ ದೇಶದ ಐಕ್ಯತೆ ನಮಗೆ ಮುಖ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿದರು.

ಕಾಂಗ್ರೆಸ್‌ನವರು ನಡೆಸುತ್ತಿರುವುದು ಭಾರತ ಜೋಡೊ ಯಾತ್ರೆಯಲ್ಲ, ಭಾರತ್‌ ತೋಡೊ (ಒಡೆಯುವ) ಯಾತ್ರೆ ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಜೋಶಿ ಬೇಜಾವಾಬ್ದಾರಿಯಿಂದ ಮಾತಾಡಿದ್ದಾರೆ. ಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಯಾತ್ರೆಗೆ ಸಿಗುತ್ತಿರುವ ಜನ ಬೆಂಬಲ ನೋಡಿ ಬಿಜೆಪಿಗೆ ಭಯ ಸೃಷ್ಟಿಯಾಗಿದೆ. ಬಿಜೆಪಿ ಭ್ರಮೆಯಲ್ಲಿ ಮುಳುಗಿದ್ದು, ಜನರನ್ನೂ ಭ್ರಮೆಯಲ್ಲಿ ಮುಳುಗಿಸಿದೆ ಎಂದು ಆರೋಪಿಸಿದರು.

ಬಿಜೆಪಿಯವರು ನಕಲಿ ದೇಶ ಭಕ್ತರು ಎಂದು ಜರಿದ ಅವರು, ದೇಶದಲ್ಲಿ ಸುರಕ್ಷತೆ ಎಲ್ಲಿದೆ? ಕಾಶ್ಮೀರಿ ಪಂಡಿತರನ್ನು ಈಗಲೂ ಗುಂಡಿಕ್ಕಿ ಕೊಲ್ಲಲಾಗುತ್ತಿದೆ. ಈ ಸರ್ಕಾರದ ಅವಧಿಯಲ್ಲಿ ಎಲ್ಲಿ ಮತ್ತು ಯಾರಿಗೆ ರಕ್ಷಣೆ ಇದೆ ಎಂದು ಪ್ರಶ್ನಿಸಿದರು.

ಸ್ವಾತಂತ್ರ್ಯ ಬಂದಾಗ ಈ ದೇಶ ಸುಡುಗಾಡಿನಂತಿತ್ತು. ಎಲ್ಲದರಲ್ಲೂ ಹಿಂದೆ ಉಳಿದಿತ್ತು. ಇಂತಹ ದೇಶವನ್ನು ಇಷ್ಟು ಸಮೃದ್ಧಿ ಮಾಡಿದ್ದು ಕಾಂಗ್ರೆಸ್ ಎಂದರು.

ಆರ್ಥಿಕವಾಗಿ ಸಬಲರಾದವರಿಗೆ ಮೀಸಲಾತಿ ಬೇಡ ಎಂಬ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರೊಬ್ಬ ದಡ್ಡ. ಏನು ಬೇಕಾದರೂ ಮಾತನಾಡುತ್ತಾರೆ. ಜಾತೀಯತೆ ಹೋಗುವವರೆಗೂ ಮೀಸಲಾತಿ ಇರಬೇಕು‌. ಮೀಸಲಾತಿ ಲಾಭ ಪಡೆದು ಮುಂದೆ ಬಂದವರು ಸ್ವಯಂ ಪ್ರೇರಿತರಾಗಿ ಬೇರೆಯವರಿಗೆ ಬಿಟ್ಟು ಕೊಟ್ಟರೆ ಅಭ್ಯಂತರವಿಲ್ಲ. ಆರ್ಥಿಕವಾಗಿ ಸಬಲರಾದವರಿಗೆ ಮೀಸಲಾತಿ ಬೇಡವೆಂದು ಕಡ್ಡಾಯ ಮಾಡಲಾಗುವುದಿಲ್ಲ ಎಂದು ಹೇಳಿದರು.

ಹಿಂದಿನ ಲೇಖನಶ್ರೀರಂಗಪಟ್ಟಣ: ಮಾದಕ ವಸ್ತು ವ್ಯಸನ ಕುರಿತು ಜಾಗೃತಿ ಕಾರ್ಯಕ್ರಮ
ಮುಂದಿನ ಲೇಖನಐಸಿಸ್ ಸಂಪರ್ಕದಲ್ಲಿದ್ದವರನ್ನು ಗಲ್ಲು ಶಿಕ್ಷೆ ವಿಧಿಸಿ: ಮೊಹಮ್ಮದ್ ನಲಪಾಡ್