ಮನೆ ಕಾನೂನು ಅಕ್ರಮ ಗಣಿಗಾರಿಕೆ ಆರೋಪಿ ಜನಾರ್ದನ ರೆಡ್ಡಿ ಪಾಸ್ ಪೋರ್ಟ್ ನವೀಕರಣಕ್ಕೆ ವಿಶೇಷ...

ಅಕ್ರಮ ಗಣಿಗಾರಿಕೆ ಆರೋಪಿ ಜನಾರ್ದನ ರೆಡ್ಡಿ ಪಾಸ್ ಪೋರ್ಟ್ ನವೀಕರಣಕ್ಕೆ ವಿಶೇಷ ನ್ಯಾಯಾಲಯ ಅನುಮತಿ

0

ಅಕ್ರಮವಾಗಿ ಕಬ್ಬಿಣದ ಅದಿರು ಮಾರಾಟ ಮಾಡಿರುವ ಹಾಗೂ ರಾಜ್ಯ ಸರ್ಕಾರಕ್ಕೆ ರಾಜಧನ ಖೋತಾ ಮತ್ತಿತರ ತೆರಿಗೆಗಳನ್ನು ನಷ್ಟ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಕ್ರಿಮಿನಲ್‌ ಪ್ರಕರಣಕ್ಕೆ ಗುರಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ತಮ್ಮ ಪಾಸ್‌ಪೋರ್ಟ್‌ ನವೀಕರಣ ಮಾಡಿಸಿಕೊಳ್ಳಲು ಬುಧವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿಸಿದೆ (ಪೊಲೀಸ್ವರಿಷ್ಠಾಧಿಕಾರಿ ವರ್ಸಸ್ಜಿ ಜನಾರ್ದನ ರೆಡ್ಡಿ ಮತ್ತು ಇತರರು).

ಪಾಸ್‌ಪೋರ್ಟ್‌ ನವೀಕರಿಸಿಕೊಳ್ಳಲು ಅನುಮತಿಸುವಂತೆ ಕೋರಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದ ಹಾಲಿ ಮತ್ತು ಮಾಜಿ ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರೀತ್ಜೆ ಈ ಆದೇಶ ಮಾಡಿದ್ದಾರೆ.

“ಆರೋಪಿ ಜನಾರ್ದನ ರೆಡ್ಡಿ ಹಿಂದೆ ಈ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿಲ್ಲ. ಹೈದರಾಬಾದ್‌ನಲ್ಲಿನ ಸಿಬಿಐ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ನವೀಕರಣಕ್ಕಾಗಿ ರೆಡ್ಡಿ ಅವರ ಪಾಸ್‌ಪೋರ್ಟ್‌ ಹಿಂದಿರುಗಿಸಿದ್ದಾರೆ. ಹೀಗಾಗಿ, ಮನವಿಗೆ ಸಮ್ಮತಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

2021ರ ಅಕ್ಟೋಬರ್‌ 27ರಂದು ತನ್ನ ಪಾಸ್‌ಪೋರ್ಟ್‌ ಅಸಿಂಧುಗೊಂಡಿದ್ದು, ಅದನ್ನು ನವೀಕರಿಸಲು ಅನುಮತಿಸುವಂತೆ ಕೋರಿ ಜನಾರ್ದನ ರೆಡ್ಡಿ ಮನವಿ ಸಲ್ಲಿಸಿದ್ದರು. ಈ ಸಂಬಂಧ ಅಗತ್ಯ ಆದೇಶ ಮಾಡುವಂತೆ ಹಿರಿಯ ಹೆಚ್ಚುವರಿ ಸರ್ಕಾರಿ ಅಭಿಯೋಜಕರು ವಾದಿಸಿದ್ದರು.

ಪಾಸ್‌ಪೋರ್ಟ್‌ ನವೀಕರಣ ಕೋರಿದ್ದ ಮನವಿಯ ಜೊತೆಗೆ ಹೈದರಾಬಾದ್‌ನಲ್ಲಿನ ಸಿಬಿಐ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಪಾಸ್‌ಪೋರ್ಟ್‌ ನವೀಕರಿಸಿಕೊಳ್ಳಲು ಅದನ್ನು ಹಿಂದಿರುಗಿಸುವಂತೆ ನಿರ್ದೇಶಿಸಿರುವ ಆದೇಶವನ್ನು ರೆಡ್ಡಿ ಲಗತ್ತಿಸಿದ್ದರು. ಅಂತೆಯೇ, 2020ರ ಫೆಬ್ರವರಿ 17ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯ ಮಾಡಿರುವ ಆದೇಶವನ್ನು ಪೀಠದ ಗಮನಕ್ಕೆ ಜನಾರ್ದನ ರೆಡ್ಡಿ ಪರ ವಕೀಲರು ತಂದಿದ್ದರು.

ಕೆಲ ದಿನಗಳ ಹಿಂದೆ ಅಕ್ರಮವಾಗಿ ಕಬ್ಬಿಣದ ಅದಿರು ಮಾರಾಟ ಮಾಡಿದ ಪ್ರಕರಣದಲ್ಲಿ ಜನಾರ್ದನ ರೆಡ್ಡಿ, ಅವರ ಆಪ್ತ ಕಾರ್ಯದರ್ಶಿ ಮತ್ತು ದೇವಿ ಎಂಟರ್‌ಪ್ರೈಸಸ್‌ ಪಾಲುದಾರ ಕೆ ಮೆಹಫೂಜ್‌ ಅಲಿ ಖಾನ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.

ಪ್ರಕರಣದ ಹಿನ್ನೆಲೆ: ಜನಾರ್ದನ ರೆಡ್ಡಿ, ಮೆಹಫೂಜ್‌ ಅಲಿ ಖಾನ್‌ ಮತ್ತು ಬಿ ವಿ ಶ್ರೀನಿವಾಸ ರೆಡ್ಡಿ ವಿರುದ್ಧ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ ಕಾಯಿದೆ 1957ರ ಸೆಕ್ಷನ್‌ 21 ಮತ್ತು 23 ಜೊತೆಗೆ 4(1), 4(1ಎ) ಅಡಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

2009-10ನೇ ಸಾಲಿನಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಹಲವು ಕಡೆ ದಾಳಿ ನಡೆಸಿದ್ದರು. ಆ ವೇಳೆ ಜನಾರ್ದನ ರೆಡ್ಡಿ, ಮೆಹಫೂಜ್‌ ಅಲಿ ಖಾನ್‌ ಮತ್ತು ಶ್ರೀನಿವಾಸ ರೆಡ್ಡಿ ಸೇರಿದಂತೆ ಹಲವರ ಮನೆ, ಸಂಸ್ಥೆ, ಕಚೇರಿಗಳ ಮೇಲೆ ದಾಳಿ ನಡೆಸಿ, ಡಿಜಿಟಲ್‌ ದತ್ತಾಂಶ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಪಾರ ಪ್ರಮಾಣದಲ್ಲಿ ಕಬ್ಬಿಣದ ಅದಿರನ್ನು ಹೊರತೆಗೆದು, ಅದನ್ನು ಅಕ್ರಮವಾಗಿ ಸಾಗಿಸಲಾಗಿತ್ತು ಎಂಬ ಅಂಶ ಅದರಿಂದ ಬೆಳಕಿಗೆ ಬಂದಿತ್ತು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯದೇ ಮತ್ತು ಸರ್ಕಾರಕ್ಕೆ ರಾಜಧನ ಮತ್ತಿತರ ಶುಲ್ಕ ಪಾವತಿಸದೆ ಆರೋಪಿಗಳು 1,25,419 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಎನ್‌ ಶೇಕ್‌ಸಾಬ್‌ ಮೈನ್ಸ್‌ ಮತ್ತು ತಿರುಮಲ ಕನ್ವೇಯರ್‌ ಸಿಸ್ಟಮ್ಸ್‌ಗೆ ಮಾರಾಟ ಮಾಡಿದ್ದರು ಎಂಬುದು ತನಿಖೆಯ ಸಂದರ್ಭದಲ್ಲಿ ಪತ್ತೆಯಾಗಿತ್ತು. 1,25,419 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರಿನ ಪೈಕಿ 44,695 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದಂತೆ ಗದಿಗನೂರ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಬಾಕಿ ಇರುವ 80,724 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರಿಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಶ್ರೀ ಮಿನರಲ್ಸ್‌ ಮೂಲಕ ಆರ್‌ಬಿಎಸ್‌ಎಸ್‌ಎನ್‌ ಕಂಪೆನಿಗೆ 4,557 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ಮಾರಿದ್ದರ ಪೈಕಿ 1,069 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರಿಗೆ ಸಂಬಂಧಿಸಿದಂತೆ ಯಾವುದೇ ಅನುಮತಿ ಅಥವಾ ಪರವಾನಗಿಯನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆಯಲಾಗಿರಲಿಲ್ಲ. ಇದರಿಂದ ರಾಜ್ಯ ಸರ್ಕಾರಕ್ಕೆ ‌23,89,650 ರೂಪಾಯಿ ಆರ್ಥಿಕ ನಷ್ಟ ಉಂಟಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಆರೋಪಪಟ್ಟಿ ಮತ್ತು ಸಂಬಂಧಿತ ದಾಖಲೆಯನ್ನು ತನಿಖಾಧಿಕಾರಿಯು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.