ಮನೆ ರಾಜ್ಯ ಪರಿಷತ್ ಚುನಾವಣೆ: ಕಾಂಗ್ರೆಸ್ ನ ಡಾ.ಡಿ.ತಿಮ್ಮಯ್ಯ, ಜೆಡಿಎಸ್ ನ ಸಿ.ಎನ್. ಮಂಜೇಗೌಡ, ಚುನಾವಣಾಧಿಕಾರಿಗೆ ಹೈಕೋರ್ಟ್ ನಿಂದ...

ಪರಿಷತ್ ಚುನಾವಣೆ: ಕಾಂಗ್ರೆಸ್ ನ ಡಾ.ಡಿ.ತಿಮ್ಮಯ್ಯ, ಜೆಡಿಎಸ್ ನ ಸಿ.ಎನ್. ಮಂಜೇಗೌಡ, ಚುನಾವಣಾಧಿಕಾರಿಗೆ ಹೈಕೋರ್ಟ್ ನಿಂದ ಸಮನ್ಸ್ ಜಾರಿ

0

ಮೈಸೂರು (Mysuru): ವಿಧಾನ ಪರಿಷತ್ತಿಗೆ ಚುನಾವಣೆ ನಾಮಪತ್ರ ಸಲ್ಲಿಸುವ ವೇಳೆ ಆಗಿರುವ ಲೋಪದೋಷ ಕುರಿತಂತೆ ಕಾಂಗ್ರೆಸ್ ನ ಡಾ.ಡಿ.ತಿಮ್ಮಯ್ಯ, ಜೆಡಿಎಸ್ ನ ಸಿ.ಎನ್. ಮಂಜೇಗೌಡ, ಚುನಾವಣಾಧಿಕಾರಿಗೆ ರಾಜ್ಯ ಉಚ್ಛ ನ್ಯಾಯಾಲಯವು ಸಮನ್ಸ್‌ ಜಾರಿ ಮಾಡಿದೆ.

ಕಾಂಗ್ರೆಸ್ ಪಕ್ಷದ ಡಾ.ಡಿ. ತಿಮ್ಮಯ್ಯ ಹಾಗೂ ಜಾ.ದಳದ ಸಿ.ಎನ್. ಮಂಜೇಗೌಡ ಅವರು ನಾಮಪತ್ರ ಸಲ್ಲಿಕೆ ವೇಳೆ ಅಗತ್ಯ ದಾಖಲೆಗಳನ್ನು ಸಲ್ಲಿಸದೆ ಚುನಾವಣಾ ನೀತಿ-ನಿಬಂಧನೆಗಳನ್ನು‌ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ರಘು ಆರ್. ಕೌಟಿಲ್ಯ ಅವರು ಉಚ್ಚ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.

ಈ ಕುರಿತಂತೆ ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಡಾ.ಡಿ. ತಿಮ್ಮಯ್ಯ ಹಾಗೂ ಜಾ.ದಳದ ಅಭ್ಯರ್ಥಿಯಾಗಿದ್ದ ಸಿ.ಎನ್. ಮಂಜೇಗೌಡ ಅವರಿಗೆ ಸಮನ್ಸ್ ಜಾರಿ ಮಾಡಿ, ಮುಂದಿನ ವಿಚಾರಣೆಯನ್ನು ಜೂ.27ಕ್ಕೆ ನಿಗದಿ ಮಾಡಿ ಆದೇಶಿಸಿದೆ.

ಕಾಂಗ್ರೆಸ್ ಪಕ್ಷದ ಡಾ.ಡಿ. ತಿಮ್ಮಯ್ಯ ಹಾಗೂ ಜಾ.ದಳದ ಸಿ.ಎನ್. ಮಂಜೇಗೌಡ ಅವರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ಘೋಷಿತ ಆಸ್ತಿ ಕುರಿತಾದ ದಾಖಲೆಗಳು, ಅವರುಗಳ ಮೇಲಿರುವ ಪ್ರಕರಣಗಳ ಬಗ್ಗೆ ಮಾಹಿತಿ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಒದಗಿಸಿರಲಿಲ್ಲ. ಇದು ಚುನಾವಣಾ ಪ್ರಕ್ರಿಯೆಯಲ್ಲಿ ಆಗಿರುವ ದೊಡ್ಡ ಲೋಪದೋಷವಾದ್ದರಿಂದ ಅಂದೇ ಈ ಕುರಿತಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಲಿಖಿತವಾಗಿ ದೂರು ಸಲ್ಲಿಸಲಾಯಿತಾದರೂ ಯಾವುದೇ ರೀತಿಯ ಪ್ರಯೋಜನ ಆಗಿರಲಿಲ್ಲ. ಆದ ಕಾರಣ, ಈ ಎರಡೂ ಪಕ್ಷಗಳ ಇಬ್ಬರೂ ಅಭ್ಯರ್ಥಿಗಳ ಆಯ್ಕೆಯನ್ನು ಅನರ್ಹಗೊಳಿಸಿ, ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿರುವ ನನ್ನನ್ನು ಆಯ್ಕೆ ಮಾಡಬೇಕು ಎಂದು ರಘು ಆರ್ ಕೌಟಿಲ್ಯ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಬಿಜೆಪಿ ಅಭ್ಯರ್ಥಿ ರಘು ಆರ್. ಕೌಟಿಲ್ಯ ಅವರ ಪರವಾಗಿ ಉಚ್ಚ ನ್ಯಾಯಾಲಯದ ವಕೀಲರಾದ ಶರತ್ ಗೌಡ ವಾದ ಮಂಡಿಸಿದ್ದರು.