ಪಾಂಡವಪುರ:ಶ್ರೀರಂಗಪಟ್ಟಣದ ಪಕ್ಷಿಧಾಮ (ರಂಗನತಿಟ್ಟು) ನಿರ್ಮಾಣಕ್ಕೆ ರೈತರಿಂದ ವಶಪಡಿಸಿಕೊಳ್ಳಲಾಗಿದ್ದು, ಭೂ ಪರಿಹಾರದ ಹಣವನ್ನು ನೀಡದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ ಜಪ್ತಿಗೆ ಕೋರ್ಟ್ ಆದೇಶದ ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ಅಧಿಕಾರಿಗಳು ಮಂಗಳವಾರ ಉಪವಿಭಾಗಾಧಿಕಾರಿಗಳ ಕಚೇರಿಗೆ ಜಪ್ತಿಗೆ ಮುಂದಾದರು.
ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ರೈತ ಎ.ಶ್ರೀನಿವಾಸ್ ಅವರಿಂದ ಸುಮಾರು ೧.೧೧ ಗುಂಟೆ ಜಮೀನನ್ನು ಪಕ್ಷಿಧಾಮದ(ರಂಗನತಿಟ್ಟು)ದ ಅಭಿವೃದ್ದಿಗಾಗಿ ೨೦೦೮ರಲ್ಲಿ ಭೂಸ್ವಾಧೀನಪಡಿಸಿಕೊಳ್ಳಲಾಗಿತ್ತು. ಭೂಪರಿಹಾರದ ಮೊತ್ತ ೧.೧೬ ಕೋಟಿ ರೂ.ಗಳಾಗಿದ್ದು ಈ ಪೈಕಿ ೫೮ ಲಕ್ಷ ರೂ. ಪರಿಹಾರದ ಹಣ ನೀಡಲಾಗಿತ್ತು. ಬಾಕಿ ಹಣವನ್ನು ನೀಡದ ಹಿನ್ನೆಲೆಯಲ್ಲಿ ಸಿವಿಲ್ ಕೋರ್ಟ್ ಮೆಟ್ಟಿಲೇರಿತ್ತು. ಸಿವಿಲ್ ನ್ಯಾಯಾಲಯವು ರೈತರಿಗೆ ಬಾಕಿ ಪರಿಹಾರ ನೀಡುವಂತೆ ಆದೇಶಿಸಿತ್ತು. ನಂತರ ಹೈಕೋರ್ಟ್ ನಲ್ಲೂ ಸಹ ಭೂಸ್ವಾಧೀನದ ಬಾಕಿ ಹಣ ನೀಡುವಂತೆ ಆದೇಶಿಸಿ, ಭೂಪರಿಹಾರ ನೀಡದೆ ಹೋದರೆ ಆಸ್ತಿ ಜಪ್ತಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ಅಧಿಕಾರಿಗಳಾದ ಸೂರ್ಯನಾರಾಯಣ್, ಮನೋಹರ್ ಹಾಗೂ ಸಿದ್ದರಾಜು ಎಂಬುವರು ಮಂಗಳವಾರ ಮಧ್ಯಾಹ್ನ ಪಟ್ಟಣದಲ್ಲಿರುವ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಕಚೇರಿ ಜಪ್ತಿ ಮಾಡಲು ಮುಂದಾದರು.
ಈ ವೇಳೆ ಅಧಿಕಾರಿಗಳು ಕೋರ್ಟ್ ಸೂಚನೆಯಂತೆ ಬಾಕಿ ೫೪,೮೩,೪೦೮ ರೂ.ಮೊತ್ತವನ್ನು ರೈತರಿಗೆ ನೀಡಲಾಗುವುದು ಎಂದು ಪರಿಹಾರ ಹಣದ ಚೆಕ್‌ನ ಸಂಖ್ಯೆಯ ಜೆರಾಕ್ಸ್ ನೀಡಿ ಕಾಲಾವಕಾಶಕೋರಿದ ಹಿನ್ನೆಲೆಯಲ್ಲಿ ಕೋರ್ಟ್ ಅಧಿಕಾರಿ ಕಾಲಾವಕಾಶ ನೀಡಿ ಜಪ್ತಿಯನ್ನು ಸ್ಥಗಿತಗೊಳಿಸಿ ವಾಪಸ್ಸಾದರು.