ಕೆಲವೊಮ್ಮೆ ವಕೀಲರು ಮತ್ತು ದಾವೆದಾರರ ಕಾರಣಕ್ಕೆ ಪ್ರಕರಣಗಳ ವಿಚಾರಣೆ ವಿಳಂಬವಾದರೂ ನ್ಯಾಯಾಲಯಗಳನ್ನು ದೂಷಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಬೇಸರ ಸೂಚಿಸಿತು.
ಪ್ರಕರಣದಲ್ಲಿ ವಾದ ಮಂಡಿಸುತ್ತಿದ್ದ ವಕೀಲರು ಅಸ್ವಸ್ಥರಾಗಿರುವುದರಿಂದ 2017ರಲ್ಲಿ ಸಲ್ಲಿಸಲಾಗಿದ್ದ ಸಿವಿಲ್ ಮೇಲ್ಮನವಿಯನ್ನು ಮುಂದೂಡುವಂತೆ ಬೇರೊಬ್ಬ ವಕೀಲರು ಕೋರಿದ ವೇಳೆ ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ರಜಾಕಾಲೀನ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
“ಆ ವಕೀಲರ ಪರವಾಗಿ ನೀವೇಕೆ ವಾದಿಸುತ್ತಿಲ್ಲ? ನೀವು ಅವರ ಕಚೇರಿಗೆ ಸಂಬಂಧಿಸಿದವರಲ್ಲವೇ? ನೀವು ಕಚೇರಿ ಅರ್ಜಿಗಳನ್ನು ಓದುವುದಿಲ್ಲವೇ?” ಎಂದು ನ್ಯಾ. ಸಂಜಯ್ ಕುಮಾರ್ ಪ್ರಶ್ನಿಸಿದರು.
ಪ್ರಕರಣದ ಸಾರಾಂಶವನ್ನು (ಕೇಸ್ ಬ್ರೀಫ್) ಓದದ ಕಾರಣ ತನಗೆ ಪ್ರಕರಣದ ವಾಸ್ತವಾಂಶದ ಬಗ್ಗೆ ಅರಿವಿಲ್ಲ ಎಂದು ವಕೀಲರು ಉತ್ತರಿಸಿದರು. ಆಗ ನ್ಯಾ. ಕುಮಾರ್ “2019ರ ನಂತರ ಈಗ ಪ್ರಕರಣ ವಿಚಾರಣೆಗೆ ಬಂದಿದೆ. ವಕೀಲರು ವಾದ ಮಂಡಿಸಲು ಸಿದ್ಧರಿಲ್ಲ. ಹೀಗಂದರೇನು? (ಪ್ರಕರಣಗಳನ್ನು ಈ ರೀತಿ ಮುಂದೂಡಿಸಿ) ನಂತರ ನ್ಯಾಯಾಲಯಗಳನ್ನು ದೂಷಿಸಲಾಗುತ್ತದೆ. ರಜಾಕಾಲೀನ ಪೀಠ ವಿಚಾರಣೆ ನಡೆಸುತ್ತಿರುವಾಗಲೂ ವಾದ ಮಂಡನೆಗೆ ಇಲ್ಲಿ ಯಾರೂ ಇಲ್ಲ” ಎಂದು ಅತೃಪ್ತಿಯ ಮಳೆಗರೆದರು.
ಹಿರಿಯ ವಕೀಲರು ರಜೆಗೆಂದು ವಿದೇಶಕ್ಕೆ ತೆರಳಿದ್ದಾಗ ಕಿರಿಯ ವಕೀಲರು ಪ್ರಕರಣಗಳಲ್ಲಿ ವಾದ ಮಂಡಿಸುವ ಅವಕಾಶ ಬಳಸಿಕೊಳ್ಳುವಂತೆ ನ್ಯಾಯಾಲಯ ಕಿವಿಮಾತು ಹೇಳಿತು.
ನಿರ್ದಿಷ್ಟ ಸೂಚನೆಗಳಿಲ್ಲದಿದ್ದರೆ ಅಂತಹ (ಹಿರಿಯ ವಕೀಲರ ಅನುಪಸ್ಥಿತಿಯಲ್ಲಿ ಕಿರಿಯರು ವಾದಿಸುವ) ಅಭ್ಯಾಸವನ್ನು ರೂಢಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಪೀಠ ಹೇಳಿತು.
ಈ ಪ್ರಕರಣದಲ್ಲಿ ವಾದ ಮಂಡಿಸುತ್ತಿರುವ ವಕೀಲರು ತಮ್ಮ ಕಿರಿಯ ವಕೀಲರ ವಾದ ಮಂಡನೆಗೆ ಅವಕಾಶ ನೀಡುತ್ತಿಲ್ಲವೇ ಎಂದು ನ್ಯಾಯಾಲಯ ಪ್ರಶ್ನಿಸಿದಾಗ ಅವಕಾಶ ನೀಡುತ್ತಿರುವುದಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಕಿರಿಯ ವಕೀಲ ತಿಳಿಸಿದರು. ಸದ್ಯಕ್ಕೆ ತಾನು ಪ್ರಕರಣ ಮುಂದೂಡುವುದಾಗಿ ಹೇಳಿದ ನ್ಯಾಯಾಲಯ ಮುಂದೆ ಪ್ರಕರಣದ ವಿಚಾರಣೆ ನಡೆದಾಗ ಕಿರಿಯ ವಕೀಲರೇ ವಾದ ಮಂಡಿಸಬೇಕು. ಕಿರಿಯ ವಕೀಲರ ಪಕ್ಕ ಹಿರಿಯ ವಕೀಲ ಕುಳಿತಿರಬೇಕು ಎಂದಿತು.