ನವದೆಹಲಿ (New Delhi): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಇರಾನಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಇದು ಎರಡನೇ ಬಾರಿ. 2020ರಲ್ಲಿಯೂ ಅವರು ಸೋಂಕಿತರಾಗಿದ್ದರು.
ಈ ಕುರಿತು ಟ್ವೀಟ್ ಮೂಲಕ ಅವರು ಮಾಹಿತಿ ನೀಡಿದ್ದಾರೆ. ರಾಜೇಂದ್ರ ನಗರದಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದಿದ್ದಕ್ಕಾಗಿ ನಾನು ನಾಗರಿಕರಲ್ಲಿ ಕ್ಷಮೆ ಯಾಚಿಸುತ್ತೇನೆ. ಕೋವಿಡ್–19 ಪರೀಕ್ಷಾ ವರದಿ ಪಾಸಿಟಿವ್ ಬಂದಿರುವುದರಿಂದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಬಿಜೆಪಿ ಅಭ್ಯರ್ಥಿ ರಾಜೇಶ್ ಭಾಟಿಯಾಗೆ ಮತ ನೀಡಿ ಪಕ್ಷವನ್ನು ಗೆಲ್ಲಿಸುವಂತೆ ರಾಜೇಂದ್ರ ನಗರದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ದೆಹಲಿಯ ರಾಜೇಂದ್ರ ನಗರದಲ್ಲಿ ಉಪಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ರಾಜೇಶ್ ಭಾಟಿಯಾ ಕಣದಲ್ಲಿದ್ದಾರೆ. ಇವರ ಪರ ಪ್ರಚಾರಕ್ಕೆ ಇರಾನಿ ಭಾನುವಾರ ಅಲ್ಲಿಗೆ ತೆರಳಬೇಕಿತ್ತು.