ಮನೆ ಕಾನೂನು ಕೋವಿಡ್‌ ಹಗರಣ: ಲಾಜ್‌ ಎಕ್ಸ್‌ ಪೋರ್ಟ್ಸ್‌, ಪ್ರೂಡೆಂಟ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ಆದೇಶ

ಕೋವಿಡ್‌ ಹಗರಣ: ಲಾಜ್‌ ಎಕ್ಸ್‌ ಪೋರ್ಟ್ಸ್‌, ಪ್ರೂಡೆಂಟ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ಆದೇಶ

0

ಕೋವಿಡ್‌-19 ಮಹಾಮಾರಿ ಸಂದರ್ಭದಲ್ಲಿ ಎನ್‌-95 ಮಾಸ್ಕ್‌ ಮತ್ತು ಪಿಪಿಇ ಕಿಟ್‌ ಖರೀದಿಯಲ್ಲಿ ವ್ಯಾಪಕ ಅವ್ಯವಹಾರ ನಡೆಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ₹167 ಕೋಟಿ ನಷ್ಟ ಉಂಟು ಮಾಡಿದ ಆರೋಪದ ಮೇಲೆ ದಾಖಲಾಗಿರುವ ಪ್ರಕರಣದ ಸಂಬಂಧ ಬೆಂಗಳೂರಿನ ಲಾಜ್‌ ಎಕ್ಸ್‌ಪೋರ್ಟ್ಸ್‌ ಮತ್ತು ಮುಂಬೈನ ಪ್ರೂಡೆಂಟ್‌ ಮ್ಯಾನೇಜ್‌ಮೆಂಟ್‌ ಸಲ್ಯೂಷನ್ಸ್‌ ವಿರುದ್ಧ ಆತುರದ ಕ್ರಮಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶ ಮಾಡಿದೆ.

Join Our Whatsapp Group

ಲಾಜ್‌ ಎಕ್ಸ್‌ಪೋರ್ಟ್ಸ್‌ ಲಿಮಿಟೆಡ್‌ನ ನಿರ್ದೇಶಕ ಬಿ ವಿ ರೆಡ್ಡಿ ಮತ್ತು ಪ್ರೂಡೆಂಟ್‌ ಮ್ಯಾನೇಜ್‌ಮೆಂಟ್‌ ಸಲ್ಯೂಷನ್ಸ್‌ ನಿರ್ದೇಶಕ ವಿ ಆನಂದ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ವಿವೇಕ್‌ ಹೊಳ್ಳ ಅವರು “ಒಪ್ಪಿಗೆ ಪಡೆಯದೆ ಅರ್ಜಿದಾರರು ವೈದ್ಯಕೀಯ ಸಾಮಗ್ರಿ ಪೂರೈಸಿದ್ದಾರೆ ಎಂದು ಆರೋಪಿಸಿ, ಪ್ರಕರಣ ದಾಖಲಿಸಲಾಗಿದೆ” ಎಂದರು.

ಆಗ ಪೀಠವು “ಅರ್ಜಿದಾರರಿಗೆ ಸದ್ಯಕ್ಕೆ ರಕ್ಷಣೆ ಒದಗಿಸಲಾಗುವುದು. ಈ ವಿಚಾರದಲ್ಲಿ ವಿಸ್ತೃತ ಆದೇಶ ಮಾಡಬೇಕಿದೆ. ಪ್ರತಿವಾದಿಗಳ ಪರವಾಗಿ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕರು ನೋಟಿಸ್‌ ಪಡೆಯಬೇಕು. ಬಾಕಿ ಪಾವತಿಸುವುದರಿಂದ ಬಚಾವಾಗಲು ಇದೆಲ್ಲವನ್ನೂ ನೀವು (ಸರ್ಕಾರ) ಮಾಡಿದರೆ, ಖಂಡಿತವಾಗಿಯೂ ಅದನ್ನು ಪರಿಗಣಿಸಲಾಗುವುದು. ಅರ್ಜಿದಾರರ ವಿರುದ್ಧ ದುರುದ್ದೇಶಪೂರಿತ ಅಥವಾ ಆತುರದ ಕ್ರಮಕೈಗೊಳ್ಳಬಾರದು. ಸೂಕ್ತ ಆದೇಶ ಮಾಡಲಾಗುವುದು” ಎಂದು ನ್ಯಾಯಾಲಯವು ಡಿಸೆಂಬರ್‌ 16ರ ವಿಚಾರಣೆಯಲ್ಲಿ ಹೇಳಿತ್ತು.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಪ್ರಧಾನ ಲೆಕ್ಕಾಧಿಕಾರಿ ಮತ್ತು ಹಣಕಾಸು ಸಲಹೆಗಾರ ಡಾ. ವಿಷ್ಣು ಪ್ರಸಾದ್‌, ವೈದ್ಯಕೀಯ ಶಿಕ್ಷಣದ ನಿರ್ದೇಶಕರಿಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಪ್ರಕರಣದ ಹಿನ್ನೆಲೆ: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಪ್ರಧಾನ ಲೆಕ್ಕಾಧಿಕಾರಿ ಮತ್ತು ಹಣಕಾಸು ಸಲಹೆಗಾರ ಡಾ. ವಿಷ್ಣು ಪ್ರಸಾದ್‌ ಅವರು ವಿಧಾನಸೌಧ ಠಾಣೆಯಲ್ಲಿ ಡಿಸೆಂಬರ್‌ 13ರಂದು ಕೋವಿಡ್‌ ಸಂದರ್ಭದಲ್ಲಿ ನಡೆದಿದ್ದ ಹಗರಣಗಳ ಕುರಿತಾಗಿ ದೂರು ದಾಖಲಿಸಿದ್ದರು. ದೂರಿನಲ್ಲಿ ಈ ಕೆಳಗಿನ ಅಂಶಗಳು ಉಲ್ಲೇಖವಾಗಿದ್ದವು:

ಕೋವಿಡ್‌-19 ಸಂದರ್ಭದಲ್ಲಿ ಸಾಂಕ್ರಾಮಿಕ ಹರಡುವಿಕೆ ತಡೆಯಲು ಬೇಕಾದ ಎನ್‌-95 ಮಾಸ್ಕ್‌, ಪಿಪಿಇ ಕಿಟ್‌ ಮತ್ತಿತರರ ಸಾಮಗ್ರಿಗಳನ್ನು ಸಂಗ್ರಹಿಸುವ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡು, ಕಾನೂನು ಪ್ರಕ್ರಿಯೆಯನ್ನು ಗಾಳಿಗೆ ತೂರಿ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯಿದೆ (ಕೆಟಿಪಿಪಿ) ಮತ್ತು ಇತರೆ ಕಾನೂನನ್ನು ಉಲ್ಲಂಘಿಸಿ, ಅಂದು ಕರ್ತವ್ಯದಲ್ಲಿದ್ದ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಹಾಗೂ ಇತರರು ನೂರಾರು ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಲೆಕ್ಕ ಪತ್ರಾಧಿಕಾರಿಯಾದ ಡಾ. ಎಂ ವಿಷ್ಣು ಪ್ರಸಾದ್‌ ದೂರಿದ್ದರು.

ಕೋವಿಡ್‌ ಸಂದರ್ಭದಲ್ಲಿ ₹203,66,23,312 ಮೌಲ್ಯದ 15,51,713 ಪಿಪಿಇ ಕಿಟ್‌, ₹9.75 ಕೋಟಿ ಮೌಲ್ಯದ 42,15,047 ಎನ್-‌95 ಮಾಸ್ಕ್‌ ಸಂಗ್ರಹಿಸಲಾಗಿತ್ತು. ದಾಖಲೆಗಳಲ್ಲಿ ನೋಡಿದಾಗ 18-8-2020ರಂದು ರಾಜ್ಯ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿ 2,59,263 ಎನ್‌-95 ಮಾಸ್ಕ್‌, 2,59,263 ಪಿಪಿಇ ಕಿಟ್‌ ಸಾಮಗ್ರಿಗಳನ್ನು ₹41.35 ಕೋಟಿ ವೆಚ್ಚದಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ 17 ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಒಂದು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಬಳಸಲು ಅನುಮೋದಿಸಲಾಗಿದ್ದು, ಇದರಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಪಿಟಿಟಿ ಕಾಯಿದೆ ಪಾಲಿಸಬೇಕು. ₹41.35 ಕೋಟಿ ಮೀರಬಾರದು ಎಂದು ಷರತ್ತು ವಿಧಿಸಲಾಗಿತ್ತು.

ಇದರ ನಂತರ ಇಲಾಖೆಯು ಟೆಂಡರ್‌ ಆಹ್ವಾನಿಸಿದ್ದು, ಮೂರು ಸಂಸ್ಥೆಗಳು ಈ ಬಿಡ್‌ನಲ್ಲಿ ಭಾಗವಹಿಸಿದ್ದವು. ಲಾಜ್‌ ಎಕ್ಸ್‌ಪೋರ್ಟ್ಸ್‌ ಸಂಸ್ಥೆಯು ಒಂದು ಪಿಪಿಇ ಕಿಟ್‌ಗೆ ₹1,312.50ಯಂತೆ ಕನಿಷ್ಠ ಬಿಡ್‌ದಾರರಾಗಿರುವುದರಿಂದ ಅವರ ಬಿಡ್‌ ಸ್ವೀಕರಿಸಿ, ಅವರಿಂದ ಖರೀದಿಗೆ ಆದೇಶವನ್ನು 7-9-2020ರಂದು ಹೊರಡಿಸಲಾಗಿತ್ತು. 2,59,263 ಪಿಪಿಇ ಕಿಟ್‌ಗಳನ್ನು 15 ದಿನಗಳ ಒಳಗೆ ಸರಬರಾಜು ಮಾಡಲು ಆದೇಶಿಸಲಾಗಿತ್ತು. ಇದರ ನಂತರ ದಾಖಲೆಗಳಲ್ಲಿ ಪಿಪಿಇ ಕಿಟ್‌ ಅನ್ನು 15 ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಒಂದು ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಗೆ ನೀಡಿರುವ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲ. ಆದರೂ, ₹41,34,99,172 ಅನ್ನು ಮುಂಬೈನ ಪ್ರೂಡೆಂಟ್‌ ಮ್ಯಾನೇಜ್‌ಮೆಂಟ್‌ ಸಲ್ಯೂಷನ್ಸ್‌ಗೆ 19-9-2020ರಿಂದ 24-11-2020ರವರೆಗೆ ವರ್ಗಾಯಿಸಲಾಗಿದೆ. ಇದಲ್ಲದೇ, ₹41,34,99,187 ಗಳನ್ನು 2,59,263 ಪಿಪಿಇ ಕಿಟ್‌ಗಳಿಗೆ ಮಾತ್ರವೇ ಅಲ್ಲದೇ ಅದಕ್ಕಿಂತ ಹೆಚ್ಚುವರಿಯಾಗಿ, 55,784 ಪಿಪಿಇ ಕಿಟ್‌ಗಳಿಗೆ ನೀಡಲಾಗಿದೆ. ಈ ಹೆಚ್ಚುವರಿ ಪಿಪಿಇ ಕಿಟ್‌ಗಳನ್ನು ಯಾವುದೇ ಟೆಂಡರ್‌ ಪ್ರಕ್ರಿಯೆ ಪಾಲಿಸದೇ ಖರೀದಿಸಿಲಾಗಿದೆ. ₹41.35 ಕೋಟಿ ಅನುದಾನವನ್ನು ಪಿಪಿಇ ಕಿಟ್‌ ಮತ್ತು ಎನ್‌-95 ಮಾಸ್ಕ್‌ಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೂ ಸಂಪೂರ್ಣ ಮೊತ್ತವನ್ನು ಪಿಪಿಇ ಕಿಟ್‌ಗಳಿಗೆ ಮಾತ್ರ ವೆಚ್ಚ ಮಾಡಿರುವುದು ಕಾನೂನುಬಾಹಿರ ಕ್ರಮ.

ಇದಲ್ಲದೇ 55,784 ಪಿಪಿಇ ಕಿಟ್‌ ಮೊತ್ತ ₹7,32,16,500 ಪೂರ್ಣ ಪ್ರಮಾಣದಲ್ಲಿ ಕಾನೂನುಬಾಹಿರವಾಗಿದೆ. 13,784 ಪಿಪಿಇ ಕಿಟ್‌ಗಳನ್ನು ಸರಬರಾಜು ಆದೇಶವಿಲ್ಲದೇ ಪ್ರಕ್ರಿಯೆ ಪಾಲಿಸದೇ ಖರೀದಿ ಮಾಡಲಾಗಿದೆ. ಇದಕ್ಕೆ ಯಾವುದೇ ರೀತಿಯ ಅನುಮೋದನೆ ನೀಡಲಾಗಿಲ್ಲ. 13,784 ಪಿಪಿಇ ಕಿಟ್‌ಗಳನ್ನು ಎಲ್ಲಿಗೆ ಸರಬರಾಜು ಮಾಡಲಾಗಿದೆ ಎಂಬುದಕ್ಕೆ ಯಾವುದೇ ದಾಖಲೆ ಇಲ್ಲ. ಈ ಪಿಪಿಇ ಕಿಟ್‌ಗಳ ಮೊತ್ತ ₹1,80,91,500 ವೆಚ್ಚವಾಗಿರುವುದು ದಾಖಲೆಗಳಿಂದ ತಿಳಿದು ಬಂದಿದೆ. 20-12-2020ರಂದು ₹23,31,44,462 ಅನ್ನು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಪಿಪಿಇ ಕಿಟ್‌ ಮತ್ತು ಎನ್‌-95 ಮಾಸ್ಕ್‌ಗಳ ಖರೀದಿಗೆ ಒಪ್ಪಿಗೆ ನೀಡಿದ್ದಾರೆ.

20-03-2021ರಂದು ಸರ್ಕಾರವು ಮತ್ತೊಂದು ಆದೇಶದಲ್ಲಿ ₹12 ಕೋಟಿಯನ್ನು ವಿಶೇಷ ಪ್ರಕರಣ ಎಂದು ನೀಡಿದ್ದು, ಈ ಹಣವನ್ನು 91,450 ಪಿಪಿಇ ಕಿಟ್‌ ಮತ್ತು ಎನ್‌-95 ಮಾಸ್ಕ್‌ಗಳನ್ನು ಖರೀದಿಸಲು ಸೂಚಿಸಿತ್ತು. 29-03-2021ರಂದು ಸರ್ಕಾರ ಇನ್ನೊಂದು ಆದೇಶದಲ್ಲಿ ₹49.01 ಕೋಟಿಯನ್ನು ಪಿಪಿಇ ಕಿಟ್‌ ಮತ್ತು ಎನ್‌-95 ಮಾಸ್ಕ್‌ಗಳ ಖರೀದಿಸಲು ನೀಡಿದ್ದು, ಕೆಟಿಪಿಪಿ ಕಾಯಿದೆ ಅಡಿ ಬಳಕೆ ಪ್ರಮಾಣವನ್ನು ಪತ್ರವನ್ನು ಅಕೌಂಟೆಂಟ್‌ ಜನರಲ್‌ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿತ್ತು. ಈ ಆದೇಶದ ಆನಂತರ ಲಾಜ್‌ ಎಕ್ಸ್‌ಪೋರ್ಟ್ಸ್‌ನಿಂದ 6,22,350 ಪಿಪಿಇ ಕಿಟ್‌ಗಳನ್ನು ₹81,68,34,375 ವೆಚ್ಚದಲ್ಲಿ ಖರೀದಿಸಲಾಗಿದೆ. ಈ ಐದು ಖರೀದಿ ಆದೇಶಗಳನ್ನು ಯಾವುದೇ ಟೆಂಡರ್‌ ಪ್ರಕ್ರಿಯೆ ಇಲ್ಲದೇ ವಿವಿಧ ಸಂಸ್ಥೆಳಿಂದ ಕೊಟೇಶನ್‌ ಕರೆಯದೇ ನೇರವಾಗಿ ಲಾಜ್‌ ಎಕ್ಸ್‌ಪೋರ್ಟ್ಸ್‌ಗೆ ನೀಡಿರುವುದು ಕಾನೂನುಬಾಹಿರ ಮತ್ತು ಕೆಟಿಪಿಪಿ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಅಲ್ಲದೆ, ₹23 ಕೋಟಿಯನ್ನು 22-12-2020ರಂದು ಸರ್ಕಾರದಿಂದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಪಾವತಿಯಾಗಿರುವುದು ಕಂಡುಬಂದಿದೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ₹13,16,83,800 ಅನ್ನು ಪ್ರೂಡೆಂಟ್ ಮ್ಯಾನೇಜ್‌ಮೆಂಟ್‌ ಸಲ್ಯೂಷನ್ಸ್‌ಗೆ 5-11-2020ರಂದು ಪಾವತಿಸಿರುವುದು ದಾಖಲೆಗಳಲ್ಲಿ ಸ್ಪಷ್ಟವಾಗಿದೆ. ಸರ್ಕಾರದಿಂದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಹಣ ಪಾವತಿಯಾಗುವ ಮುನ್ನವೇ ಪ್ರೂಡ್ಯೆಂಟ್‌ ಮ್ಯಾನೇಜ್‌ಮೆಂಟ್‌ಗೆ ಹಣ ಪಾವತಿಯಾಗಿದೆ. 2,67,960 ಪಿಪಿಇ ಕಿಟ್‌ಗಳನ್ನು ಕೆಎಸ್‌ಎಂಸಿಎಲ್‌ ಸಂಸ್ಥೆಗೆ ನೀಡಲಾಗಿದೆ ಎಂದು ಲಭ್ಯವಿರುವ ದಾಖಲೆಗಳು ಹೇಳಿವೆ. ಎರಡೂ ಖರೀದಿ ಆದೇಶಗಳನ್ನು 15-06-2021ರಂದು ಅಂದಿನ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು 3 ಲಕ್ಷ ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡಲು ನೀಡಿದ್ದು, ಇದರಲ್ಲಿ 2,67,960 ಪಿಪಿಇ ಕಿಟ್‌ಗಳನ್ನು ಕೆಎಸ್‌ಎಂಸಿಎಲ್‌ ಸರಬರಾಜು ಮಾಡಿದೆ. ಈ ಪಿಪಿಇ ಕಿಟ್‌ಗಳಿಗೆ ಯಾವುದೇ ಹಣ ಪಾವತಿಯಾಗಿಲ್ಲ. ಆದರೂ ಈ ಪೂರ್ಣ ಮೊತ್ತದ ಖರೀದಿಯು ₹35,16,97,500 ವೆಚ್ಚದಲ್ಲಿ ಖರೀದಿ ಮಾಡಲಾಗಿದೆ ಎಂದು ಹೇಳಲಾಗಿದೆ. ಇದು ಕಾನೂನುಬಾಹಿರ ಎಂದು ದಾಖಲೆಗಳು ಸ್ಪಷ್ಟಪಡಿಸಿವೆ.

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ 45 ಸಾವಿರ ಮತ್ತು 34,390 ಪಿಪಿಇ ಕಿಟ್‌ ಉಪಯೋಗಿಸದೇ ಸ್ಟಾಕ್‌ನಲ್ಲಿ ಇಡಲಾಗಿತ್ತು. ಇವುಗಳ ಒಟ್ಟು ₹9,99,54,625 ಮೊತ್ತವು ಸರ್ಕಾರಕ್ಕೆ ನಷ್ಟದ ಬಾಬತ್ತಾಗಿದೆ. ಈ ಅಕ್ರಮ ಮತ್ತು ಕಾನೂನುಬಾಹಿರ ವಹಿವಾಟು ಲಾಜ್‌ ಎಕ್ಸ್‌ಪೋರ್ಟ್ಸ್‌ ಜೊತೆಗೆ ನಡೆದಿದ್ದರೂ ವೈದ್ಯಕೀಯ ಸಾಮಗ್ರಿಗಳನ್ನು ಪ್ರೂಡೆಂಟ್‌ ಮ್ಯಾನೇಜ್‌ಮೆಂಟ್‌ ಸಲ್ಯೂಷನ್ಸ್‌ ಪೂರೈಸಿದೆ ಎಂದು ತೋರಿಸಿ, ಅವರಿಗೆ ₹39,54,07,627 ಹಣ ಪಾವತಿಸಲಾಗಿದೆ. ಇದರಿಂದ ಲಾಜ್‌ ಎಕ್ಸ್‌ಪೋರ್ಟ್ಸ್‌ ಜೊತೆ ಯಾವುದೇ ವ್ಯವಹಾರವಾಗಿಲ್ಲ ಎಂಬುದು ತಿಳಿದು ಬಂದಿದೆ.

ಟೆಂಡರ್‌ನಲ್ಲಿ ಲಾಜ್‌ ಎಕ್ಸ್‌ಪೋರ್ಟ್ಸ್‌ ಭಾಗವಹಿಸಲು ಅರ್ಹವಾಗದಿದ್ದರೂ ಎನ್‌-95 ಮಾಸ್ಕ್‌ ಮತ್ತು ಪಿಪಿಇ ಕಿಟ್‌ಗಳನ್ನು ಅವರಿಂದ ವ್ಯಾಪಕವಾಗಿ ಖರೀದಿಸಲಾಗಿದೆ. ಆದರೆ, ಟೆಂಡರ್‌ನಲ್ಲಿ ಭಾಗವಹಿಸದ ಪ್ರೂಡೆಂಟ್‌ ಸಲ್ಯೂಷನ್ಸ್‌ಗೆ ಇಡೀ ಮೊತ್ತವನ್ನು ಪಾವತಿಸಲಾಗಿದೆ. ಅಲ್ಲದೇ, ಎನ್‌-95 ಮಾಸ್ಕ್‌ ಮತ್ತು ಪಿಪಿಇ ಕಿಟ್‌ಗಳು ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾಗದೇ ಇರುವುದರಿಂದ ಲಾಜ್‌ ಎಕ್ಸ್‌ಪೋರ್ಟ್ಸ್‌, ಪ್ರೂಡೆಂಟ್‌ ಮ್ಯಾನೇಜ್‌ಮೆಂಟ್‌ ಸಲ್ಯೂಷನ್ಸ್‌, ಡಿಎಂಇ ನಿರ್ದೇಶಕ ಡಾ. ಪಿ ಜಿ ಗಿರೀಶ್‌, ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕ ಜಿ ಪಿ ರಘು, ಆರೋಗ್ಯ ಸಲಕರಣಾಧಿಕಾರಿ ಮುನಿರಾಜು, ರಾಜಕೀಯ ಕಾರ್ಯಾಂಗದಲ್ಲಿ ಕಾರ್ಯನಿರ್ವಹಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಅಂದಿನ ಆರೋಗ್ಯ ತುರ್ತು ಪರಿಸ್ಥಿತಿ ಲಾಭ ಪಡೆದು, ಕೆಟಿಪಿಪಿ ಕಾಯಿದೆಯ ಪ್ರಕ್ರಿಯೆಗಳನ್ನು ಗಾಳಿಗೆ ತೂರಿ ಸರ್ಕಾರದ ಆಸ್ತಿಗೆ ಹಾನಿ ಮಾಡಿ, ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ. ಈ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಲಾಕ್‌ ಎಕ್ಸ್‌ಪೋರ್ಟ್ಸ್‌ನಿಂದ ದೊಡ್ಡ ಪ್ರಮಾಣದಲ್ಲಿ ಲಾಭ ಪಡೆದು ಸರ್ಕಾರಕ್ಕೆ ₹167 ಕೋಟಿಯನ್ನು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂದು ಡಾ. ವಿಷ್ಣು ಪ್ರಸಾದ್‌ ಅವರು ಸಲ್ಲಿಸಿದ್ದ ದೂರಿನಲ್ಲಿ ತಿಳಿಸಲಾಗಿದೆ.

ದೂರಿನ ಆಧಾರದಲ್ಲಿ ಡಾ. ಪಿ ಜಿ ಗಿರೀಶ್‌, ಜಿ ಪಿ ರಘು, ಮುನಿರಾಜು, ಲಾಜ್‌ ಎಕ್ಸ್‌ಪೋರ್ಟ್ಸ್‌, ಪ್ರೂಡೆಂಟ್‌ ಮ್ಯಾನೇಜ್‌ಮೆಂಟ್‌ ಸಲ್ಯೂಷನ್ಸ್‌ ಹಾಗೂ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಇತರರ ವಿರುದ್ಧ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯಿದೆ 1999ರ 2000ರ ನಿಯಮ ಸೆಕ್ಷನ್‌ 23, ಐಪಿಸಿ ಸೆಕ್ಷನ್‌ಗಳಾದ 120ಬಿ, 403, 406, 409 ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಡಿ. ಕುನ್ಹಾ ಅವರ ನೇತೃತ್ವದ ಸಮಿತಿಯು ಕೋವಿಡ್‌ ಕಾಲಘಟ್ಟದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿತ್ತು. ಕೋವಿಡ್‌ ಅಕ್ರಮದ ವಿಚಾರಣಾ ವರದಿ ಅಧ್ಯಯನಕ್ಕಾಗಿ ನೇಮಿಸಿರುವ ಸಂಪುಟ ಉಪಸಮಿತಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅಧ್ಯಕ್ಷರಾಗಿದ್ದಾರೆ.