ಮನೆ ರಾಜ್ಯ ಚಳಿ ಎಫೆಕ್ಟ್‌ಗೆ ಮೇವು ತಿನ್ನದ ಹಸುಗಳು – ಹಾಲಿನ ಉತ್ಪಾದನೆ ಇಳಿಕೆ..!

ಚಳಿ ಎಫೆಕ್ಟ್‌ಗೆ ಮೇವು ತಿನ್ನದ ಹಸುಗಳು – ಹಾಲಿನ ಉತ್ಪಾದನೆ ಇಳಿಕೆ..!

0

ಚಿಕ್ಕಬಳ್ಳಾಪುರ : ಜಿಲ್ಲೆಯ ಬಹುತೇಕ ರೈತರು ಹೈನೋದ್ಯಮವನ್ನೇ ನಂಬಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಹಸುಗಳನ್ನೆ ಮಕ್ಕಳಂತೆ ಸಾಕಿ ಸಲುಹಿ, ಅವುಗಳು ನೀಡುವ ಹಾಲನ್ನು ಮಾರಿ ಜೀವನ ಮಾಡ್ತಿದ್ದಾರೆ. ಇತ್ತೀಚಿಗೆ ಅಲ್ಲಿಯ ಹಸುಗಳ ಹಾಲಿನ ಇಳುವರಿಯಲ್ಲಿ ಗಣನೀಯವಾಗಿ ಕುಸಿತವಾಗಿದ್ದು, ಒಂದೆಡೆ ರೈತರಿಗೆ ನಷ್ಟ- ಮತ್ತೊಂದೆಡೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಮೆಗಾ ಡೈರಿಗೆ ಹಾಲಿನ ಕೊರತೆ ಉಂಟಾಗಿದೆ.

ಹಾಲು ಉತ್ಪಾದನೆಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು, ಹೈನೋದ್ಯಮದಲ್ಲಿ ಎತ್ತಿದ ಕೈ. ನೆರೆ ಬರಲಿ.. ಬರವೇ ಇರಲಿ ಯಾವುದಕ್ಕೂ ಜಗ್ಗದೆ ತಾವು ಸಾಕಿರುವ ಹಸುಗಳನ್ನೆ ನಂಬಿಕೊಂಡು, ಹಾಲು ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಈಗ ಚಳಿಯಿಂದಾಗಿ ಹಸುಗಳು ಸರಿಯಾಗಿ ಹುಲ್ಲು – ಮೇವು ತಿನ್ನುತ್ತಿಲ್ಲ. ನೀರು ಸರಿಯಾಗಿ ಕುಡಿಯುತ್ತಿಲ್ಲ. ಇದರಿಂದ ಹಾಲಿನ ಇಳುವರಿಯಲ್ಲಿ ಗಣನೀಯವಾಗಿ ಕುಸಿತವಾಗಿದೆ.

ಕಳೆದ ಕೆಲವು ದಿನಗಳಿಂದ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಕೋಚಿಮುಲ್ ಮೆಗಾ ಡೈರಿಗೆ ಪ್ರತಿದಿನ 25 ಸಾವಿರ ಲೀಟರ್ ಹಾಲಿನ ಕೊರತೆ ಉಂಟಾಗುತ್ತಿದೆ. ಇದೇ ರೀತಿ ಮುಂದುವರೆದರೆ ಮೆಗಾ ಡೈರಿಗೆ ನಿರೀಕ್ಷೆಯಷ್ಟು ಹಾಲು ಸಿಗಲ್ಲ ಅಂತ, ಕೋಚಿಮುಲ್ ಆಡಳಿತ ಮಂಡಳಿ ಜನವರಿ, ಫೆಬ್ರ್ರವರಿ, ಮಾರ್ಚ್ ಸೇರಿ ಮೂರು ತಿಂಗಳೂ ಪ್ರತಿ ಲೀಟರ್ ಹಾಲಿಗೆ 1 ರೂ. ದರ ಹೆಚ್ಚಳ ಮಾಡಿದೆ.

ಇದರಿಂದ ರೈತರು ತಮ್ಮ ಹಸುಗಳನ್ನು ಮುತುವರ್ಜಿಯಿಂದ ನೋಡಿಕೊಂಡು ಹಾಲಿನ ಹೊಳೆ ಹರಿಸಲಿ ಎಂಬ ಆಶಯ ಹೊಂದಿದ್ದಾರೆ. ಆದ್ರೂ ಒಕ್ಕೂಟ ಕೊಡೋ ಹಣ ಸಾಕಾಗ್ತಿಲ್ಲ. ಮೇವಿನ ದರ ದುಬಾರಿಯಾಗಿದ್ದು, ಹಾಲಿನ ದರ ಮತ್ತಷ್ಟು ಹೆಚ್ಚಳ ಮಾಡಬೇಕು ಅಂತಾರೆ ಹೈನುಗಾರರು.

ಪ್ರತಿದಿನ ಚಿಮುಲ್ ಡೈರಿಗೆ 5 ಲಕ್ಷ ಲೀಟರ್ ಹಾಲು ಹರಿದು ಬರುತ್ತದೆ, ಚಳಿಗಾಲ ಹಾಗೂ ಬೇಸಿಗೆಯಲ್ಲಿ ಹಾಲಿನ ಇಳುವರಿ ಕಡಿಮೆಯಾಗದಂತೆ ಮಾಡಲು ಮುಂದಾಗಿರುವ ಕೊಚಿಮುಲ್ ಆಡಳಿತ ಮಂಡಳಿ, ಹಾಲಿನ ದರವನ್ನ ಲೀಟರ್‌ಗೆ 1 ರೂ. ಹೆಚ್ಚಳ ಮಾಡಿದೆ. ಆದ್ರೆ ಚಳಿ ಗಾಳಿಗೆ ನಡುಗ್ತಿರೋ ಹಸುಗಳು ಜಪ್ಪಯ್ಯ ಅಂದ್ರೂ… ಹೊಟ್ಟೆ ತುಂಬ ಮೇವು ತಿನ್ನದೇ ಕ್ಯಾನ್ ತುಂಬ ಹಾಲು ಕೊಡ್ತಿಲ್ಲ. ಇದರಿಂದ ರೈತರ ಪರಿಸ್ಥಿತಿ ಹೇಳತೀರದಾಗಿದೆ.