ಮಂಡ್ಯ: ಜಿಲ್ಲೆಯ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತಾಗಿ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ನಾರ್ಕೋ ಸಮನ್ವಯ ಕೇಂದ್ರದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೆಡಿಕಲ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚಾಗಿ ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಿದ್ದಾರೆ, ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಪೊಲೀಸ್ ಇಲಾಖೆ ಹೆಚ್ಚು ಪರಿಶೀಲನಾ ನಡೆಸಿ ಹಾಗೂ ಹಾಸ್ಟೆಲ್ ಗಳಿಗೆ ನಿಯಮಿತವಾಗಿ ಭೇಟಿ ನೀಡಿ ಎಂದರು.
ಮೆಡಿಕಲ್ ಸ್ಟೋರ್ ಗಳಲ್ಲಿ ವೈದ್ಯರು ದೃಢೀಕರಿಸಿದ ಚೀಟಿ ಇಲ್ಲದೆ ಔಷಧಿ ನೀಡುವಂತಿಲ್ಲ, ಜಿಲ್ಲೆಯ ಯಾವುದೇ ಮೆಡಿಕಲ್ ಸ್ಟೋರ್ ಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಔಷಧಿ, ಎಂ.ಪಿ.ಪಿ ಕಿಟ್ ನೀಡಿದರೆ ಅಂತಹವರ ವೈದ್ಯಕೀಯ ಲೈಸೆನ್ಸ್ ರದ್ದು ಮಾಡಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳ ಪೊಷಕರು ಅಥವಾ ಸಂಬAಧಿಕರಿಗೆ ಪತ್ರ ಬರೆಸುವ ಮೂಲಕ ಜಾಗೃತಿ ಮೂಡಿಸುವ ಅಭಿಯಾನ ನಡೆಸಿ ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ಮಾದಕ ವಸ್ತುಗಳ ಉತ್ಪಾದನೆ ಹಾಗೂ ಸೇವನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ, ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಇಂತಹಾ ಚಟುವಟಿಕೆಗಳು ಸಂಭವಿಸದAತೆ ಎಚ್ಚರಿಕೆ ವಹಿಸಿ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಗಸ್ತಿನಲ್ಲಿರುವಾಗ ಹೆಚ್ಚಿನ ಕ್ರಮವಹಿಸಿ ಎಂದು ಹೇಳಿದರು.
ಕೆಲವೊಮ್ಮೆ ವಿವಿಧ ಆಮಿಷಕ್ಕೊಳಗಾಗಿ ರೈತರು ಯಾರಿಗೂ ತಿಳಿಯದಂತೆ ಗಾಂಜಾ ಗಿಡಗಳನ್ನು ಬೆಳೆಯುವ ಸಾಧ್ಯತೆ ಇರುತ್ತದೆ, ಮಾದಕ ವಸ್ತುಗಳನ್ನು ಬೆಳೆಸಿ ಮಾರಾಟ ಮಾಡುವುದು ಕಾನೂನು ಬಾಹಿರ ಹಾಗೂ ಅದರಿಂದ ಉಂಟಾಗುವ ಪರಿಣಾಮಗಳ ಕುರಿತಾಗಿ ಅರಿವು ಮೂಡಿಸು ಕಾರ್ಯಕ್ರಮಗಳನ್ನು ರೂಪಿಸಿ ಎಂದರು.
ಅಬಕಾರಿ ಇಲಾಖೆ ತನ್ನ ಕಾರ್ಯವ್ಯಾಪ್ತಿ ಮತ್ತು ಕಾರ್ಯದಕ್ಷತೆಯನ್ನು ಚುರುಕುಗೊಳಿಸಿ, ಹೇರಳವಾಗಿ ರೈಲುಗಳ ಮೂಲಕ ಮಾದಕವಸ್ತುಗಳು ಬರುತ್ತವೆ, ರೈಲ್ವೆ ಪೊಲೀಸ್ ಹೆಚ್ಚಿನ ಗಮನ ಹರಿಸಿ ಜಿಲ್ಲೆಗೆ ರೈಲುಗಳ ಮೂಲಕ ಬರುವ ಗೂಡ್ಸ್ ಗಳನ್ನು ಪರಿಶೀಲನೆ ನಡೆಸಿ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಕೆ.ಮೋಹನ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚೆಲುವಯ್ಯ, ಕುಟುಂಬ ಕಲ್ಯಾಣಧಿಕಾರಿ ಡಾ. ಬೆಟ್ಟಸ್ವಾಮಿ, ಆಯುಷ್ ವೈದ್ಯಾಧಿಕಾರಿ ಡಾ. ಪುಷ್ಪಲತಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.














