ಮೈಸೂರು(Mysuru): ‘ಕ್ರೆಡೆಲ್’ ಅಧಿಕಾರಿ ಡಿ.ಕೆ.ದಿನೇಶ್ ಕುಮಾರ್ ಅನುಮಾನಾಸ್ಪದ ಸಾವು ಪ್ರಕರಣದ ಶೀಘ್ರ ತನಿಖೆಗೆ ಆಗ್ರಹಿಸಿ ‘ರೋಟರಿ ವೆಸ್ಟ್’ ನೇತೃತ್ವದಲ್ಲಿ 21 ರೋಟರಿ ಕ್ಲಬ್‌ಗಳ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.
ನ್ಯಾಯಾಲಯದ ಮಹಾತ್ಮ ಗಾಂಧಿ ಪುತ್ಥಳಿ ಎದುರು ಜಮಾಯಿಸಿದ ಪ್ರತಿಭಟನಕಾರರು, ಪ್ರಕರಣ ದಾಖಲಾಗಿ 15 ದಿನ ಕಳೆದರೂ ತಪ್ಪಿತಸ್ಥರ ಬಂಧನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೋಟರಿ ವೆಸ್ಟ್ ಅಧ್ಯಕ್ಷ ಡಾ.ಎಂ.ಡಿ.ರಾಘವೇಂದ್ರ ಪ್ರಸಾದ್ ಮಾತನಾಡಿ, ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿಲ್ಲ. ಕೊಳೆತ ಸ್ಥಿತಿಯಲ್ಲಿ ಆಸ್ಪತ್ರೆಗೆ ಶವ ತರಲಾಗಿತ್ತು. ಸಾವನ್ನು ಎರಡು ದಿನ ಮುಚ್ಚಿಡಲಾಗಿತ್ತು. ತಪ್ಪಿತಸ್ಥರ ವಿರುದ್ಧ ಇನ್ನೂ ಕ್ರಮ ಜರುಗಿಸಿಲ್ಲ. ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ ಎಂದು ಆರೋಪಿಸಿದರು.
ಸಂಸ್ಥೆಯ ಬಿ.ಚಂದ್ರ ಮಾತನಾಡಿ, ದಿನೇಶ್ ಅವರು ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಿಗೆ ಸಾವಿರಾರು ಉಪನ್ಯಾಸ ನೀಡಿದ್ದರು. ದಕ್ಷ ಅಧಿಕಾರಿ, ಸಂಪನ್ಮೂಲ ವ್ಯಕ್ತಿಯನ್ನು ರಾಜ್ಯ ಕಳೆದುಕೊಂಡಿದೆ. ನಿಗೂಢ ಸಾವಿನ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ಪೊಲೀಸರ ಮೇಲೆ ನಂಬಿಕೆಯಿದೆ. ಪಾರದರ್ಶಕ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಅಲ್ಲಿಯವರೆಗೂ ಹೋರಾಟ ನಡೆಸುತ್ತೇವೆ ಎಂದರು.
ಮನವಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದರು. ವಕೀಲ ನಾರಾಯಣ, ರೋಟರಿ ಸದಸ್ಯರಾದ ಜಿ.ಕೆ.ಸುಧೀಂದ್ರ, ಡಾ.ಎಚ್.ಎಸ್.ಶಿವಣ್ಣ, ಜೋಸೆಫ್ ಮ್ಯಾಥ್ಯೂ, ಹನುಮಂತ್, ರಂಗರಾವ್ ಕೃಷ್ಣ ಇದ್ದರು.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕೆಆರ್’ಇಡಿಎಲ್) ಯೋಜನಾ ನಿರ್ದೇಶಕರಾಗಿದ್ದ ಡಿ.ಕೆ.ದಿನೇಶ್ ಕುಮಾರ್ (51) ಅನುಮಾನಾಸ್ಪದವಾಗಿ ಮೃತಪಟ್ಟಿರುವುದಾಗಿ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಸಿಆರ್‌ಪಿಸಿ 174 (ಸಿ) ಅಡಿ ಪ್ರಕರಣ ದಾಖಲಾಗಿದೆ.














