ಮಂಗಳೂರು(ದಕ್ಷಿಣ ಕನ್ನಡ): ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಮಂಗಳೂರಲ್ಲಿ ಬೆಳಕಿಗೆ ಬಂದಿದೆ. ಎರಡು ಪ್ರತ್ಯೇಕ ಪೊಲೀಸ್ ಕಾರ್ಯಾಚರಣೆಯಲ್ಲಿ ಮೂರು ಮಂದಿಯನ್ನು ಬಂಧಿಸಲಾಗಿದೆ.
ಮೊದಲ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳ್ಯಾರು ಪರಿಸರದಲ್ಲಿ ಹಾಗೂ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಫಳ್ನೀರು ಎಂಬಲ್ಲಿ ಮೊಬೈಲ್ ನಲ್ಲಿ ಬೆಟ್ಟಿಂಗ್ ಅ್ಯಪ್ ಉಪಯೋಗಿಸಿಕೊಂಡು ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾಟಗಳ ಸೋಲು ಗೆಲುವಿನಲ್ಲಿ ಅದೃಷ್ಠದ ಆಟವಾದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಾ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿಕೊಂಡು ಅಕ್ರಮ ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಎರಡು ಕಡೆ ದಾಳಿ ನಡೆಸಿ
ದೀಪಕ್(33), ಹಾಗೂ ಸಂದೀಪ್ ಶೆಟ್ಟಿ(38) ಎಂಬುವವರನ್ನು ವಶಕ್ಕೆ ಪಡೆದುಕೊಂಡು ಇವರಿಂದ ಬೆಟ್ಟಿಂಗ್ ದಂಧೆಗೆ ಸಾರ್ವಜನಿಕರಿಂದ ಸಂಗ್ರಹಿಸಿದ ಒಟ್ಟು 31,000 ನಗದು ಹಾಗೂ 4 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತಿನ ಆಂದಾಜು ಮೌಲ್ಯ ರೂ. 1,11,000/- ಆಗಬಹುದು. ಈ ಬಗ್ಗೆ ಸುರತ್ಕಲ್ ಹಾಗೂ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತದೆ.
ಇನ್ನು ಎರಡನೇ ಪೊಲೀಸ್ ಕಾರ್ಯಾಚರಣೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲದ ಮತ್ತೊಬ್ಬ ಆರೋಪಿ ಸಂದೀಪ್ ಪೈ (44) ಎಂಬುವವನ್ನು ಕಾವೂರು ಪೊಲೀಸರು ರವಿವಾರ ಬಂಧಿಸಿದ್ದಾರೆ.
ಆರೋಪಿಯು ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.