ಮನೆ ರಾಜ್ಯ ರಾಜ್ಯಕ್ಕೆ ‘ನನ್ನ ಕೈಯಲ್ಲಾದ ಸೇವೆ ಮಾಡ್ತೀನಿ’ಎಂದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ

ರಾಜ್ಯಕ್ಕೆ ‘ನನ್ನ ಕೈಯಲ್ಲಾದ ಸೇವೆ ಮಾಡ್ತೀನಿ’ಎಂದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ

0

ಬೆಂಗಳೂರು: ಭಾರತದ ಕ್ರಿಕೆಟ್ ಲೋಕದ ದಿಗ್ಗಜ, ಕರ್ನಾಟಕದ ಹೆಮ್ಮೆಯ ಆಟಗಾರ ಅನಿಲ್ ಕುಂಬ್ಳೆ ಅವರು ಈಗ ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಈ ಮಹತ್ವದ ಹೊಣೆಗಾರಿಕೆಯನ್ನು ಸ್ವೀಕರಿಸಿ, “ನನ್ನಿಂದ ಏನಾದರೂ ಸೇವೆ ಆಗತ್ತೆ ಅಂದ್ರೆ ಖುಷಿಯಾಗುತ್ತೆ. ರಾಜ್ಯಕ್ಕೆ ನನ್ನ ಕೈಯಲ್ಲಾದಷ್ಟು ಸೇವೆ ಸಲ್ಲಿಸುತ್ತೀನಿ” ಎಂಬ ಮಾತುಗಳಿಂದ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಅನಿಲ್ ಕುಂಬ್ಳೆ ಅವರು ಇಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಖಂಡ್ರೆ ಅವರು ಕುಂಬ್ಳೆಯನ್ನು “ದೇಶದ ಹೆಮ್ಮೆ” ಎಂದು ಶ್ಲಾಘಿಸಿ, ಅವರು ಯಾವುದೇ ಸಂಭಾವನೆ ಪಡೆಯದೆ, ಸೇವಾಭಾವದಿಂದ ಈ ಹೊಣೆಗಾರಿಕೆಯನ್ನು ಸ್ವೀಕರಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

“ಅನಿಲ್ ಕುಂಬ್ಳೆ ಅವರು ದೇಶದ ಮಟ್ಟಿಗೆ ಖ್ಯಾತಿ ಪಡೆದ ಕ್ರಿಕೆಟಿಗ. ಅವರ ಸೇವಾ ಮನೋಭಾವ ನಮಗೆ ಪಾಠವಾಗಬೇಕು. ಅವರು ಹಿಂದೆಯೂ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿದ್ದರು. ಈಗ ಅವರು ಸರ್ಕಾರದ ಅಧಿಕೃತ ರಾಯಭಾರಿಯಾಗಿ, ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಉತ್ತೇಜನ ನೀಡಲಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಅಧಿಕೃತ ಎಂಒಯು ಸಹಿ ಮಾಡಲಾಗುತ್ತದೆ.”

“ಈ ಬೃಹತ್ ಹೊಣೆಗಾರಿಕೆಗೆ ನನಗೆ ಅವಕಾಶ ಕೊಟ್ಟ ಕರ್ನಾಟಕ ಸರ್ಕಾರಕ್ಕೆ ಧನ್ಯವಾದ. ಹಿಂದೆ ನಾನು ವನ್ಯಜೀವಿ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದೆ. ನನಗೆ ಪ್ರಕೃತಿಯ ಮೇಲೆ ವಿಶೇಷ ಆಸಕ್ತಿ ಇದೆ. ನಮ್ಮ ಮಕ್ಕಳಲ್ಲಿ, ಮುಂದಿನ ಪೀಳಿಗೆಯಲ್ಲಿ ವನ್ಯಜೀವಿಗಳ ಕುರಿತ ಕಾಳಜಿಯ ಜಾಗೃತಿ ಮೂಡಬೇಕು. ಎಲ್ಲರಿಗೂ ಇದು ಜವಾಬ್ದಾರಿ ಎಂಬ ಅರಿವು ಬರಬೇಕಾಗಿದೆ.”