ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ ವೃತ್ತಿಜೀವನಕ್ಕೆ ನಿವೃತ್ತಿ ಹೇಳಿದ್ದಾರೆ. 221 ಪಂದ್ಯಗಳನ್ನು ಆಡಿ 187 ವಿಕೆಟ್‌ಗಳನ್ನು ಪಡೆದಿರುವ ಅಶ್ವಿನ್ ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಪ್ರತಿ ಅಂತ್ಯವು ಹೊಸ ಆರಂಭವನ್ನು ಹೊಂದಿರುತ್ತದೆ. ಹಾಗೆಯ, ಐಪಿಎಲ್ ಕ್ರಿಕೆಟಿಗನಾಗಿ ನನ್ನ ಸಮಯ ಇಂದು ಕೊನೆಗೊಳ್ಳುತ್ತದೆ. ಎಲ್ಲಾ ಅದ್ಭುತ ನೆನಪುಗಳು ಮತ್ತು ಸಂಬಂಧಗಳನ್ನು ನೀಡಿದ ಎಲ್ಲಾ ಫ್ರಾಂಚೈಸಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಮುಖ್ಯವಾಗಿ ಐಪಿಎಲ್ ಮತ್ತು ಬಿಸಿಸಿಐಗೆ ಕೃತಜ್ಞತೆಗಳು ಎಂದು ಹೇಳಿದ್ದರು.
ಐಪಿಎಲ್‌ನಲ್ಲಿ ಅಶ್ವಿನ್ ಐದು ತಂಡಗಳ ಪರ ಆಡಿದ್ದಾರೆ ಅಷ್ಟೇ ಅಲ್ಲದೇ ನಾಯಕನಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದಾರೆ. ತಮ್ಮ ಐಪಿಎಲ್ ವೃತ್ತಿಜೀವನದ ಅವಧಿಯಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಪಂಜಾಬ್ ಕಿಂಗ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಅನ್ನು ಪ್ರತಿನಿಧಿಸಿದ್ದರು.
ಅಶ್ವಿನ್ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಯಜುವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಸುನಿಲ್ ನರೈನ್ ಮತ್ತು ಪಿಯೂಷ್ ಚಾವ್ಲಾ ನಂತರ ಅಶ್ವಿನ್ ಇದ್ದಾರೆ. ಅಶ್ವಿನ್ ಕೊನೆಯ ಬಾರಿ ಚೆನ್ನೈ ತಂಡದ ಪರ ಆಡಿದ್ದರು. 2025 ರಲ್ಲಿ ಚೆನ್ನೈ ತಂಡ ಅಶ್ವಿನ್ ಅವರನ್ನು 9.75 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ 9 ಪಂದ್ಯವಾಡಿ 7 ವಿಕೆಟ್ ಮಾತ್ರ ಪಡೆದಿದ್ದರು.















