ಭೋಪಾಲ್: ಮಧ್ಯಪ್ರದೇಶ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ 230 ಶಾಸಕರ ಪೈಕಿ 90 ಮಂದಿ (ಶೇ .39) ವಿರುದ್ಧ ಕ್ರಮಿನಿಲ್ ಪ್ರಕರಣಗಳಿದ್ದು, 34 ಮಂದಿ ಜನಪ್ರತಿನಿಧಿಗಳು ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ವರದಿ ಪ್ರಕಾರ, ಈ ಪೈಕಿ 34 ಶಾಸಕರು ಐದು ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ಶಿಕ್ಷೆಯಾಗಬಹುದಾದ ಮತ್ತು ಜಾಮೀನುರಹಿತ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಶಿವಪುರಿ ಜಿಲ್ಲೆಯ ಪಿಚೋರ್ ನಿಂದ ಆಯ್ಕೆಯಾಗಿರುವ ಬಿಜೆಪಿಯ ಪ್ರೀತಮ್ ಲೋಧಿ, ಕೊಲೆ ಆರೋಪ ಎದುರಿಸುತ್ತಿರುವ ಬಿಜೆಪಿಯ ಏಕೈಕ ಶಾಸಕ. ಹೊಸದಾಗಿ ಆಯ್ಕೆಯಾಗಿರುವ ಇನ್ನಿತರ ಐದು ಶಾಸಕರು ಕೊಲೆ ಯತ್ನದ ಆರೋಪ ಎದುರಿಸುತ್ತಿದ್ದಾರೆ.
ಮೂವರು ಶಾಸಕರು ಮಹಿಳೆಯರಿಗೆ ಸಂಬಂಧಿಸಿದ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ.
230 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ163 ಸ್ಥಾನಗಳಲ್ಲಿ ಜಯ ಗಳಿಸಿದ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಕಾಂಗ್ರೆಸ್ 66 ಸ್ಥಾನಗಳಲ್ಲಿ ಜಯ ಗಳಿಸಿದೆ.
ಬಿಜೆಪಿಯ 51 ಮಂದಿ ಶಾಸಕರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಈ ಪೈಕಿ 16 ಮಂದಿ ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ನ 38 ಶಾಸಕರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, 17 ಮಂದಿ ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ.
ವಿಧಾನಸಭೆಗೆ ಆಯ್ಕೆಯಾಗಿರುವ ಭಾರತ್ ಆದಿವಾಸಿ ಪಕ್ಷದ ಏಕೈಕ ಶಾಸಕ ಕಮಲೇಶ್ ದೊಡಿಯಾರ್ ಸಹ ಕ್ರಿಮಿನಲ್ ಪ್ರಕರಣ ಹೊಂದಿದ್ದಾರೆ.