ಮನೆ ರಾಜ್ಯ ಆರ್ಥಿಕ ನೆರವು ಪಡೆದು ಕೌಶಲ್ಯ ತರಬೇತಿ ನೀಡದ ಕಂಪನಿಗಳ ವಿರುದ್ಧ ಕ್ರಿಮಿನಲ್ ಕೇಸ್: ಸಚಿವ ಶರಣ...

ಆರ್ಥಿಕ ನೆರವು ಪಡೆದು ಕೌಶಲ್ಯ ತರಬೇತಿ ನೀಡದ ಕಂಪನಿಗಳ ವಿರುದ್ಧ ಕ್ರಿಮಿನಲ್ ಕೇಸ್: ಸಚಿವ ಶರಣ ಪ್ರಕಾಶ್ ಪಾಟೀಲ್ ಸೂಚನೆ

0

ಬೆಂಗಳೂರು:  ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಪಡೆದರೂ ಸಹ ಅಭ್ಯರ್ಥಿಗಳಿಗೆ ತರಬೇತಿ ನೀಡದ 8 ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜೀವನೋಪಾಯ ಹಾಗೂ ಕೌಶಲ್ಯಭಿವೃದ್ದಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬುಧವಾರ ಸಂಜೆ ವಿಕಾಸಸೌಧದಲ್ಲಿ ರಾಷ್ಟ್ರೀಯ ಜೀವನೋಪಾಯ ಮಿಷನ್‍ನ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ, ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು, ಸರ್ಕಾರದ ಮಹತ್ವದ ಯೋಜನೆಯನ್ನು ಅನುಷ್ಠಾನ ಮಾಡದಿರುವ ಕಂಪನಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಡಿಪ್ಲೊಮಾ, ಐಐಟಿ ಸೇರಿದಂತೆ ಮತ್ತಿತರ ವೃತ್ತಿಪರ ಕೋರ್ಸ್‌ಗಳಿಗೆ ತರಬೇತಿ ನೀಡಲು ಒಪ್ಪಂದ ಮಾಡಿಕೊಂಡು ನಿಯಮ ಉಲ್ಲಂಘನೆ ಮಾಡಿರುವ 8 ಕಂಪನಿಗಳ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ  ದೂರು ದಾಖಲಿಸಬೇಕು. ಜೊತೆಗೆ ತಕ್ಷಣದಿಂದಲೇ ಅನ್ವಯವಾಗುವಂತೆ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಿ, ಮುಂದೆ ಇಂತಹ ಏಜೆನ್ಸಿಗಳಿಗೆ ತರಬೇತಿ ನೀಡುವ ಟೆಂಡರ್‌ಗಳನ್ನು ನೀಡಬಾರದು ಎಂದು ತಾಕೀತು ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಈ ಯೋಜನೆಯಡಿ ಗ್ರಾಮೀಣ ಮತ್ತು ನಗರ ಭಾಗದಲ್ಲಿರುವ ವೃತ್ತಿಪರ ಕೋರ್ಸ್‌ಗಳಿಗೆ ತರಬೇತಿ ನೀಡಲು ಒಟ್ಟು 74.65  ಕೋಟಿ ರೂ. ಪಡೆದುಕೊಂಡಿದ್ದಾರೆ. ನಿಯಮಗಳನ್ನು ಪಾಲನೆ‌ ಮಾಡದಿರುವವರಿಂದ ಬಡ್ಡಿ ಸಮೇತವಾಗಿ ವಸೂಲಿ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಿಗದಿತ ಗುರಿ ತಲುಪಲು ವಿಫಲವಾಗಿರುವವರನ್ನು ಸುಸ್ಥಿದಾರರು (ಡಿಫಾಲ್ಟರ್) ಎಂದು ಪರಿಗಣಿಸಬೇಕು. ಅಲ್ಲದೇ, ಈ ಕಂಪನಿಗಳಿಗೆ ಹಣ ಬಿಡುಗಡೆ ಮಾಡಿರುವ ಅಧಿಕಾರಿಗಳ ಮೇಲೂ ಕಾನೂನು ಕ್ರಮ ಜರುಗಿಸುವಂತೆ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಹೇಳಿದರು.

ಕೆಲವು ಕಂಪನಿಗಳು ಹೊರ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತವೆ. ಇವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಮುಂದಿನ ದಿನಗಳಲ್ಲಿ ಇವರಿಗೆ ಯಾವುದೇ ರೀತಿಯ ಆರ್ಥಿಕ ನೆರವು ನೀಡದಂತೆ ಗಮನಕ್ಕೆ ತನ್ನಿ ಎಂದು ತಿಳಿಸಿದರು.

ಕೆಲವರು ಅರ್ಹತೆ ಇಲ್ಲದಿದ್ದರೂ ತರಬೇತಿ ನೋಡುತ್ತೇವೆ ಎಂದು ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಇದರ ಬಗ್ಗೆಯೂ ತನಿಖೆ ನಡೆಸಬೇಕು. ಮುಂದಿನ ದಿನಗಳಲ್ಲಿ ಇದು ಪುನಾರವರ್ತನೆ ಆದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಗುರಿ ತಲುಪಬೇಕು:

ಇನ್ನು ಮುಂದೆ ಅರ್ಹತೆ ಇರುವ ಕಂಪೆನಿಗಳೊಂದಿಗೆ ಮಾತ್ರ ತರಬೇತಿಗೆ ಒಪ್ಪಂದ ಮಾಡಿಕೊಳ್ಳಬೇಕು. ಅವರು ನಿಗದಿತ ಸಮಯದಲ್ಲಿ ನಾವು ನೀಡಿರುವ ಗುರಿಯನ್ನು ತಲುಪಲೇಬೇಕು. ಒಂದು ವೇಳೆ ನಿಯಮ ಪಾಲನೆ ಮಾಡದಿದ್ದರೆ, ಅಂತಹವರನ್ನು ಕಪ್ಪು ಪಟ್ಡಿಗೆ ಸೇರಿಸಲು ಹಿಂದೆ ಮುಂದೆ ನೋಡಬೇಡಿ ಎಂದು ತಾಕೀತು ಮಾಡಿದರು.

ಉದಾಹರಣೆಗೆ ನಮ್ಮ ಇಲಾಖೆಯ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಕಂಪನಿ ನೂರು ದಿನಗಳಲ್ಲಿ ಅಷ್ಟೇ ಸಂಖ್ಯೆಯ ಅಭ್ಯರ್ಥಿಗಳಿಗೆ ತರಬೇತಿ ನೀಡುವುದಾಗಿ ಹೇಳಿದರೆ, ಅದನ್ನು ಪೂರ್ಣಗೊಳಿಸಲೇಬೇಕು. ಯಾವುದೇ ಕಾರಣಕ್ಕೂ ವಿನಾಯಿತಿ ನೀಡಬಾರದು. ಕರಾರುಗಳನ್ನು ಒಪ್ಪದೆ ಇದ್ದರೆ, ಅಂತಹವರಿಗೆ ಟೆಂಡರ್ ಪ್ರಕ್ರಿಯೆಯಲ್ಲಿ  ಭಾಗಿಯಾಗಲು ಅವಕಾಶ ನೀಡಬಾರದು ಎಂದು ಸೂಚಿಸಿದರು.

ಇನ್ನು ಮುಂದೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿರುವ ತರಬೇತಿ ಸಂಸ್ಥೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಪ್ರತಿ ತಿಂಗಳು ಕಡ್ಡಾಯವಾಗಿ ಭೇಟಿ ಕೊಟ್ಟು ಅಲ್ಲಿನ ಪ್ರಗತಿ ಪರಿಶೀಲನೆ ನಡೆಸಬೇಕು.

ಬಳಿಕ ಕೆಳ ಹಂತದ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ಕಡ್ಡಾಯವಾಗಿ ವರದಿಯನ್ನು ಸಲ್ಲಿಸಬೇಕು.

ಬರುವ ದಿನಗಳಲ್ಲಿ ಖುದ್ದು ನಾನೇ ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಉದಾಸೀನ ತೋರಿದರೆ, ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಸಚಿವ ಶರಣ್ ಪ್ರಕಾಶ್ ಪಾಟೀಲ್ ಅಧಿಕಾರಿಗಳಿಗೆ ನೇರ ಎಚ್ಚರಿಕೆ ಕೊಟ್ಟರು.

ಸಭೆಯಲ್ಲಿ ಮಿಷನ್ ನಿರ್ದೇಶಕಿ ಪಿಐ ಶ್ರೀವಿದ್ಯಾ, ಹೆಚ್ಚುವರಿ ಮಿಷನ್ ನಿರ್ದೇಶಕ ಅರ್ಜುನ್ ಒಡೆಯರ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಏನಿದು ಯೋಜನೆ?

ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ 2023 ಅನ್ನು 25 ಸೆಪ್ಟೆಂಬರ್ 2014 ರಂದು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ 98 ನೇ ಜನ್ಮದಿನದಂದು ಪ್ರಾರಂಭಿಸಲಾಗಿತ್ತು. ಇದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತದೆ.

ದೇಶದ 18 ರಿಂದ 35 ವರ್ಷದೊಳಗಿನ ಯುವಕರಿಗೆ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಮೂಲಕ ಉದ್ಯೋಗ ನೀಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ದೇಶದ ವಿವಿಧ ಕೇಂದ್ರಗಳಲ್ಲಿ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಲಾಗುತ್ತದೆ. ಇದಾದ ನಂತರ ಅವರಿಗೆ ಖಾಸಗಿ ವಲಯದಲ್ಲಿ ಕೆಲಸ ಕೊಡಿಸುವ ಕೆಲಸವೂ ನಡೆಯುತ್ತದೆ.

ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿಯಲ್ಲಿ, ನಿರುದ್ಯೋಗಿ ಯುವಕರಿಗೆ ಉಚಿತ ಕೌಶಲ್ಯ ತರಬೇತಿ ಮತ್ತು ಉದ್ಯೋಗಗಳು, ಉಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಉದ್ಯೋಗವನ್ನು ಹುಡುಕುತ್ತಿರುವ ಮತ್ತು ಏನನ್ನಾದರೂ ಮಾಡಲು ಬಯಸುವ ದೇಶದ ಅಂತಹ ಯುವಕರಿಗೆ, ದೇಶ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ವಿಕಾಸ್ ಯೋಜನೆಯನ್ನು ಪ್ರಧಾನ ಮಂತ್ರಿಯವರು ಪ್ರಾರಂಭಿಸಿದ್ದಾರೆ.

ಯೋಜನೆಯ ಉದ್ದೇಶ

ಗ್ರಾಮೀಣ ಪ್ರದೇಶದಿಂದ ಬರುವ ಯುವಕರು ತಮ್ಮ ಕೌಶಲ್ಯಕ್ಕೆ ತಕ್ಕಂತೆ ತರಬೇತಿ ಪಡೆದು ಸಬಲರಾಗಬೇಕು. ಈ ಯೋಜನೆಯಡಿಯಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲಾಗಿದ್ದು, ನಿರುದ್ಯೋಗಿ ಯುವಕರಿಗೆ ಅನುಕೂಲವಾಗಲಿದೆ.

ಹಿಂದಿನ ಲೇಖನಎಂಟು ನಾಯಿಮರಿಗಳ ಸಾವಿನ ಹೊಣೆ: ವೃದ್ಧ ಮಹಿಳೆಗೆ ವಿಧಿಸಿದ್ದ ₹1,000 ದಂಡ ಹೆಚ್ಚಳಕ್ಕೆ ಹೈಕೋರ್ಟ್‌ ನಕಾರ
ಮುಂದಿನ ಲೇಖನಜ. 26ರಂದು ವಿಜಯ್ ರಾಘವೇಂದ್ರ ನಟನೆಯ ‘ಕೇಸ್‌ ಆಫ್ ಕೊಂಡಾಣ’ ರಿಲೀಸ್