ಪಾಟ್ನಾ: ತನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದ 15 ವರ್ಷದ ಬಾಲಕಿ ಶೌಚಾಲಯಕ್ಕೆ ಹೋಗಲು ಮನೆಯಿಂದ ಹೊರಬಂದಾಗ ಐವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಗಳು ಆಕೆಯನ್ನು ಅಪಹರಿಸಿ ಆಕೆಯ ಮನೆಯಿಂದ ಸುಮಾರು 500 ಮೀಟರ್ ದೂರಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಕೃತ್ಯ ಎಸಗಿದ ಬಳಿಕ ಆಕೆಯ ಬಾಯಿಗೆ ಬಲವಂತವಾಗಿ ಕೀಟನಾಶಕ ಹಾಕಿದ್ದಾರೆ. ಮನೆಗೆ ಹಿಂತಿರುಗಿದ ನಂತರ, ಬಾಲಕಿ ತನ್ನ ಅಜ್ಜಿಯ ಬಳಿ ಕೃತ್ಯವನ್ನು ವಿವರಿಸಿದ್ದಾಳೆ.
ಶೌಚಾಲಯಕ್ಕೆ ತೆರಳಲು ಬಾಲಕಿ ನನ್ನನ್ನು ಎಬ್ಬಿಸಲಿಲ್ಲ. ಈ ವೇಳೆ ಆರೋಪಿಗಳು ಆಕೆಯನ್ನು ಅಪಹರಿಸಿ ಮನೆಯಿಂದ ಕೆಲವೇ ಮೀಟರ್ ದೂರದಲ್ಲಿ ಅಮಾನುಷವಾಗಿ ದೌರ್ಜನ್ಯ ಎಸಗಿದ್ದಾರೆ. ಆರೋಪಿಗಳು ಆಕೆಯ ಫೋನ್ ಅನ್ನು ಸಹ ಕಿತ್ತುಕೊಂಡಿದ್ದಾರೆ.
ಮನೆಗೆ ಹಿಂದಿರುಗಿದಾಗ ಆಕೆ ಘಟನೆಯನ್ನು ವಿವರಿಸಿದಳು ಮತ್ತು ಆಕೆಯ ತಂದೆಗೆ ವಿಷಯ ತಿಳಿಸಲು ಹೇಳಿದಳು ಎಂದು ಬಾಲಕಿಯ ಅಜ್ಜಿ ತಿಳಿಸಿದ್ದಾರೆ.
ಸಂತ್ರಸ್ತೆಯ ಪೋಷಕರು ಪಾಟ್ನಾದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಘಟನೆಯ ಸಮಯದಲ್ಲಿ ದೂರವಿದ್ದರು. ಮಾಹಿತಿ ಪಡೆದ ತಕ್ಷಣ ಮನೆಗೆ ಧಾವಿಸಿದರು.
ಸಂತ್ರಸ್ತೆಯನ್ನು ಮಹುವಾ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ, ವೈದ್ಯರು ಹಾಜಿಪುರದ ಸದರ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಸಂತ್ರಸ್ತೆ ಸದ್ಯಕ್ಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ನಾವು ಬಾಳಿಗಾಂವ್ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಎಫ್ ಐಆರ್ ದಾಖಲಿಸಿದ್ದೇವೆ ಮತ್ತು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಕಾಯುತ್ತಿದ್ದೇವೆ. ನಾವು ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಬಾಳಿಗಾಂವ್ ಪೊಲೀಸ್ ಠಾಣೆಯ ಎಸ್ ಐ ಪಲ್ಲವಿ ಕುಮಾರಿ ತಿಳಿಸಿದ್ದಾರೆ.