ಮನೆ ರಾಜಕೀಯ ವೈಫಲ್ಯ, ದಡ್ಡತನ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಬಗ್ಗೆ ಟೀಕೆ: ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ್ ವಾಗ್ದಾಳಿ

ವೈಫಲ್ಯ, ದಡ್ಡತನ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಬಗ್ಗೆ ಟೀಕೆ: ಸಿದ್ದರಾಮಯ್ಯ ವಿರುದ್ಧ ಆರ್ ಅಶೋಕ್ ವಾಗ್ದಾಳಿ

0

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್‌, ಡಿಸೇಲ್‌ ದರ ಏರಿಕೆಗೆ ಬಿಜೆಪಿ ನೀತಿಯೇ ಕಾರಣ, ಬಿಜೆಪಿ–ಜೆಡಿಎಸ್‌ನವರು ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲಿ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ವಾಗ್ದಾಳಿ ನಡೆಸಿದ್ದಾರೆ.

Join Our Whatsapp Group

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಗೆದ್ದಲು ಹುಳು ಕಷ್ಟ ಪಟ್ಟು ಹುತ್ತ ಕಟ್ಟುತ್ತದೆ. ಆದರೆ, ಹುತ್ತ ಕಟ್ಟಲು ಯಾವುದೇ ರೀತಿಯಲ್ಲಿಯೂ ಸಾಮರ್ಥ್ಯವಿಲ್ಲದ ಹಾವು ಮಾತ್ರ, ಕಟ್ಟುವ ಕಾರ್ಯವೆಲ್ಲಾ ಮುಗಿದ ಮೇಲೆ ಹುತ್ತದೊಳಗೆ ಕೂರುತ್ತದೆ. ಇದು ನಿಮ್ಮ ಯೋಗ್ಯತೆಯಾಗಿದೆ. ಕುಣಿಯಲಾರದವನಿಗೆ ನೆಲ ಡೊಂಕು ಎಂಬಂತೆ ನಿಮ್ಮ ವೈಫಲ್ಯ, ದಡ್ಡತನವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಬಗ್ಗೆ ಯಾಕೆ ಟೀಕೆ ಮಾಡುತ್ತೀರಿ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

ದಿಟ್ಟ ಪ್ರಶ್ನೆಗಳು ಎದುರಾದಾಗ ಅಹಂಕಾರದ ಮಾತುಗಳನ್ನಾಡಿ ವೈಯಕ್ತಿಕ ನಿಂದನೆ ಮಾಡುವುದು, ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೆ ಜನರ ಗಮನ ಬೇರೆಡೆ ಸೆಳೆದು ದಿಕ್ಕು ತಪ್ಪಿಸುವುದು, ಮತ್ತೊಬ್ಬರ ಸಾಧನೆಯನ್ನು ತನ್ನದೆಂದು ಹೇಳಿಕೊಂಡು ತಿರುಗಾಡುವುದು, ಪುಕ್ಕಟೆ ಪ್ರಚಾರ ಪಡೆಯುವುದು ಮತ್ತು ನಾನೊಬ್ಬನೇ ಮಹಾ ಬುದ್ಧಿವಂತ ಎಂದು ಗರ್ವ ಪಡುವುದು ಇವೆಲ್ಲವು ಅಸಮರ್ಥ ಸಿಎಂ ಸಿದ್ದರಾಮಯ್ಯ ಅವರ ಐದು ಗ್ಯಾರಂಟಿ ಗುಣಗಳಾಗಿವೆ ಎಂದು ಅಶೋಕ ಲೇವಡಿ ಮಾಡಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ (2004ರ ಏಪ್ರಿಲ್‌ನಿಂದ 2014ರ ಏಪ್ರಿಲ್‌ವರೆಗೆ) ಕೇಂದ್ರ ಸರ್ಕಾರ ರಾಜ್ಯಗಳಿಗೆ ಶೇ 32ರಷ್ಟು ತೆರಿಗೆ ಹಂಚಿಕೆ ಮಾಡುತ್ತಿತ್ತು. ಆದರೆ, ಕಳೆದ ಹತ್ತು ವರ್ಷಗಳ ಎನ್‌ಡಿಎ ಸರ್ಕಾರದ ಆಡಳಿತದಲ್ಲಿ (2014ರ ಏಪ್ರಿಲ್‌ನಿಂದ 2024ರ ಏಪ್ರಿಲ್‌ವರೆಗೆ) ರಾಜ್ಯಗಳಿಗೆ ಶೇ 42ರಷ್ಟು ತೆರಿಗೆ ಹಂಚಿಕೆಯಾಗಿದೆ. ಅಂದರೆ, ಯುಪಿಎ ಸರ್ಕಾರ ಶೇ 68ರಷ್ಟು ತೆರಿಗೆ ಹಣವನ್ನು ಕೇಂದ್ರದ ಬಳಿಯೇ ಉಳಿಸಿಕೊಳ್ಳುತ್ತಿತ್ತು. ಆದರೆ, ಮೋದಿ ಅವರ ಸರ್ಕಾರ ಕೇವಲ ಶೇ 58ರಷ್ಟು ತೆರಿಗೆಯನ್ನು ಕೇಂದ್ರದ ಬಳಿ ಉಳಿಸಿಕೊಳ್ಳುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಕಳೆದ ಮೂರು ವರ್ಷಗಳ ಜಾಗತಿಕ ಇಂಧನ ಪ್ರಕ್ಷುಬ್ಧತೆಯ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಭಾರತದ ಕಚ್ಚಾ ತೈಲ ಖರೀದಿ ಮೂಲಗಳನ್ನು ಬೇರೆ ಬೇರೆ ದೇಶಗಳಿಗೆ ವಿಸ್ತರಿಸಿದ ಸಮಯೋಚಿತ ನಿರ್ಧಾರದ ಪರಿಣಾಮವಾಗಿ ಪೆಟ್ರೋಲ್‌ ಬೆಲೆ ಶೇ 14ರಷ್ಟು ಕಡಿಮೆಯಾಗಿದೆ ಮತ್ತು ಡೀಸೆಲ್‌ ಬೆಲೆ ( 2021ರ ನವೆಂಬರ್‌ನಿಂದ 2024ರ ಮೇವರೆಗೆ) ಶೇ 11ರಷ್ಟು ಕಡಿಮೆಯಾಗಿದೆ. ಅದೇ ಅವಧಿಯಲ್ಲಿ, ಅಮೆರಿಕದಲ್ಲಿ ಪೆಟ್ರೋಲ್‌ ಬೆಲೆ ಶೇ 29ರಷ್ಟು ಏರಿಕೆಯಾಗಿತ್ತು. ಜಾಗತಿಕ ಕಚ್ಚಾ ತೈಲಗಳ ಬೆಲೆ ಏರಿಕೆಯಿಂದಾಗಿ ನೆರೆಯ ಪಾಕಿಸ್ತಾನ ಮತ್ತು ಶ್ರೀಲಂಕಾ ತೀವ್ರ ಆರ್ಥಿಕ ಒತ್ತಡವನ್ನು ಎದುರಿಸಿದ್ದವು. ಸದಾ ಚಿಲ್ಲರೆ ರಾಜಕಾರಣದಲ್ಲಿ ಕಾಲ ಕಳೆಯುವ ನಿಮಗೆ ಜಾಗತಿಕ ರಾಜಕೀಯ, ಜಾಗತಿಕ ಆರ್ಥಿಕ ಪರಿಸ್ಥಿತಿಯ ಬಗ್ಗೆ ಅರಿವೂ ಇಲ್ಲ. ಅದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

2021ರ  ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಕ್ರಮವಾಗಿ ಲೀಟರ್‌ಗೆ ₹5 ಮತ್ತು ₹10 ಕಡಿಮೆ ಮಾಡಿತ್ತು. ಬಳಿಕೆ 2022ರ ಮೇನಲ್ಲಿ ಲೀಟರ್ ಪೆಟ್ರೋಲ್‌ಗೆ ₹8 ಮತ್ತು ಲೀಟರ್‌ ಡೀಸೆಲ್‌ಗೆ ₹6ರಷ್ಟು ಕಡಿತಗೊಳಿಸಿತ್ತು. ಕೇಂದ್ರ ಸರ್ಕಾರವು ಎರಡು ಬಾರಿ ಅಬಕಾರಿ ಸುಂಕದಲ್ಲಿ ಗಣನೀಯ ಕಡಿತ ಮಾಡಿತ್ತು ಎಂದು ಅಶೋಕ ತಿಳಿಸಿದ್ದಾರೆ.

ಮತ್ತೊಮ್ಮೆ ಎಚ್ಚರಿಕೆ ನೀಡುತ್ತಿದ್ದೇನೆ. ನಾಲ್ಕು ಅಹಂಕಾರದ ಮಾತುಗಳನ್ನಾಡಿದ ಮಾತ್ರಕ್ಕೆ ವಿಪಕ್ಷಗಳ ಬಾಯಿ ಮುಚ್ಚಿಸಬಹುದು ಎಂಬ ಭ್ರಮೆಯಿಂದ ಹೊರಗೆ ಬನ್ನಿ. ನಿಮ್ಮ ಅಹಂಕಾರದ, ದರ್ಪದ ಮಾತುಗಳು ನಿಮ್ಮ ಚಾರಿತ್ರ್ಯವನ್ನ ಪ್ರದರ್ಶನ ಮಾಡುತ್ತವೆಯೇ ಹೊರತು ಅದರಿಂದ ನನಗೆ ಯಾವುದೇ ನಷ್ಟವಿಲ್ಲ. ನಿಮ್ಮ ಅಹಂಕಾರದಿಂದ ನನ್ನ ದನಿ ಅಡಗಿಸಲೂ ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

ಕರ್ನಾಟಕ ಕಂಡ ಅತ್ಯಂತ ಅಸಮರ್ಥ, ಪೆದ್ದ ಮುಖ್ಯಮಂತ್ರಿ ಅಂದರೆ ಅದು ಸಿದ್ದರಾಮಯ್ಯನವರು ಮಾತ್ರ. ಇತಿಹಾಸ ನಿಮ್ಮನ್ನು ಕರೆಯುವುದು ಹೀಗೆ. ನೆನಪಿಡಿ ಎಂದು ಅಶೋಕ ಟೀಕಿಸಿದ್ದಾರೆ.