ಮನೆ ರಾಜ್ಯ ಮಳೆ ಕೊರತೆಯಿಂದ 1 ಕೋಟಿ ಎಕರೆಯಲ್ಲಿ ಬೆಳೆ ಹಾನಿ: ಸಿಎಂ

ಮಳೆ ಕೊರತೆಯಿಂದ 1 ಕೋಟಿ ಎಕರೆಯಲ್ಲಿ ಬೆಳೆ ಹಾನಿ: ಸಿಎಂ

0

ಬೆಂಗಳೂರು: ಅರಣ್ಯ ಪ್ರದೇಶ ಕ್ಷೀಣಿಸಿದರೆ ಮಳೆ ಪ್ರಮಾಣವೂ ಕ್ಷೀಣಿಸುತ್ತದೆ. ಈ ಬಾರಿ ಮಳೆಯ ಕೊರತೆಯಿಂದ 1 ಕೋಟಿ ಎಕರೆ ಭೂಮಿಯಲ್ಲಿನ ಬೆಳೆ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Join Our Whatsapp Group

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿಂದು ಅರಣ್ಯ ಇಲಾಖೆಯಲ್ಲಿ ಶೌರ್ಯ ಮತ್ತು ಧೈರ್ಯದಿಂದ ಸೇವೆ ಸಲ್ಲಿಸಿ, ಅರಣ್ಯ, ವನ್ಯಜೀವಿ ಸಂರಕ್ಷಣೆ ಮಾಡಿದ 50 ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಮಾಡಿ ಮಾತನಾಡಿದ ಅವರು, ಭೌಗೋಳಿಕ ಪ್ರದೇಶದ ಶೇ.33ರಷ್ಟು ಹಸಿರು ಹೊದಿಕೆ ಇದ್ದರೆ ಮಳೆ, ಬೆಳೆ ಚೆನ್ನಾಗಿ ಆಗುತ್ತದೆ. ಹೀಗಾಗಿ ಅರಣ್ಯ ಸಂರಕ್ಷಣೆ ಇಂದಿನ ಅಗತ್ಯವಾಗಿದೆ ಎಂದರು. ಮಳೆ ಕಡಿಮೆಯಾದರೆ, ಬೆಳೆ ಉತ್ಪಾದನೆ ಕಡಿಮೆಯಾಗುತ್ತದೆ, ಆಗ ರಾಜ್ಯದ ಆದಾಯ ಕ್ಷೀಣಿಸುತ್ತದೆ. ಇದರಿಂದ ತಲಾದಾಯವೂ ಕುಗ್ಗುತ್ತದೆ. ಹೀಗಾಗಿ ಅರಣ್ಯ ಸಂರಕ್ಷಣೆ ಎಲ್ಲರ ಹೊಣೆ ಎಂದು ಪ್ರತಿಪಾದಿಸಿದರು.

ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ನಾವು ರಾಜ್ಯ ಆನೆಗಳ ಸಂಖ್ಯೆಯಲ್ಲಿ ನಂ.1 ಇದ್ದೇವೆ, ಹುಲಿಗಳ ಸಂಖ್ಯೆಯಲ್ಲಿ ನಂ.2 ಇದ್ದೇವೆ. ಇದು ಹೆಮ್ಮೆಯ ವಿಚಾರ. ಅದಕ್ಕೆ ತಕ್ಕಂತೆ ಅರಣ್ಯವೂ ಹೆಚ್ಚಬೇಕು. ವನ್ಯಜೀವಿ – ಮಾನವ ಸಂಘರ್ಷ ನಿಯಂತ್ರಿಸಬೇಕು ಎಂದು ಕಿವಿಮಾತು ಹೇಳಿದರು.

ವನ್ಯಜೀವಿಗಳಿಗೆ ಅರಣ್ಯದಲ್ಲಿ ಸಾಕಷ್ಟು ಮೇವು, ಆಹಾರ ಮತ್ತು ನೀರು ಲಭ್ಯವಾದರೆ ಅವು ಕಾಡಿನಿಂದ ನಾಡಿಗೆ ಬರುವುದು ತಪ್ಪುತ್ತದೆ. ಹೀಗಾಗಿ ಅರಣ್ಯಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ತಿಳಿಸಿದರು.