ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಜೋಯಿಡಾ ಭಾಗದಲ್ಲಿ ಆನೆಗಳು ಮತ್ತು ಮಾನವನ ಸಂಘರ್ಷ ಹೆಚ್ಚಾಗಿದ್ದು, ಲಕ್ಷಾಂತರ ರೂಪಾಯಿ ಬೆಳೆ ನಾಶವಾದರೆ, ಬೆಳೆನಾಶದ ಪರಿಹಾರ ಸಿಗದೇ ರೈತರು ಪರದಾಡುವಂತಾಗಿದೆ. ಒಂದು ವರ್ಷದಲ್ಲಿ ಆದ ನಷ್ಟವೆಷ್ಟು? ಪರಿಹಾರ ಸಿಕ್ಕಿದ್ದೆಷ್ಟು? ವನ್ಯಜೀವಿಗಳ ದಾಳಿ ತಡೆಯಲು ಅರಣ್ಯ ಇಲಾಖೆ ಕೈಗೊಂಡ ಕ್ರಮ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಪಶ್ಚಿಮಘಟ್ಟವನ್ನು ತನ್ನೊಳಗೆ ಅಡಗಿಸಿಕೊಂಡ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಬರುವ ಜೋಯಿಡಾ, ದಾಂಡೇಲಿ, ಹಳಿಯಾಳ ಭಾಗಗಳು ಆನೆಗಳ ಉಪಟಳ ಕಳೆದ ಎಂಟು ವರ್ಷಕ್ಕೆ ಹೋಲಿಸಿದರೆ ಒಂದು ವರ್ಷದಲ್ಲಿ ಹೆಚ್ಚಾಗಿದೆ.
ಜಿಲ್ಲೆಯ ಜೋಯಿಡಾ, ಹಳಿಯಾಳ ಭಾಗದ್ದು. ಕಳೆದ ಒಂದು ವಾರದಿಂದ ಜೋಯಿಡಾ ಹಾಗೂ ಹಳಿಯಾಳ ಭಾಗದಲ್ಲಿ ಆನೆಗಳು ಕಾಡಿನಿಂದ ನಾಡಿನತ್ತ ಗುಳೆ ಇಡುತ್ತಿವೆ. ಜೋಡಿಡಾದ ಪೊಟೋಲಿ ನಗರಿ ಗ್ರಾಮ ಸೇರಿದಂತೆ ಹಲವು ಕಡೆ ಆನೆಗಳು ಭತ್ತ, ಅಡಿಕೆ ಬೆಳೆ ನಾಶ ಮಾಡಿದರೆ, ಹಳಿಯಾಳ ಭಾಗದಲ್ಲಿ ಕಟಾವಿಗೆ ಬಂದ ಕಬ್ಬುಗಳು ಆನೆ ಪಾಲಾಗುತ್ತಿದೆ.
ಹಳಿಯಾಳ, ಸಾಂಭ್ರಾಣಿ, ಭಾಗವತಿ, ದಾಂಡೇಲಿ, ಪರ್ನೋಲಿ, ಜೋಯಿಡಾ, ಜಗಲಪೇಟ, ತಿನೈಘಾಟ್ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿವೆ. ಒಂದು ವರ್ಷದಲ್ಲಿ ಈ ಭಾಗದ ಒಟ್ಟು 704 ರೈತರ ತೋಟಗಳು ಆನೆಗಳ ಪಾಲಾಗಿವೆ. ಬೆಳೆದ ಬೆಳೆ ಕೈಗೆ ಬರುವಾಗಲೇ ಆನೆಗಳ ಪಾಲಾಗುತ್ತಿದ್ದು, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಅರಣ್ಯ ಇಲಾಖೆ ಈವರೆಗೆ 56,73,941 ಲಕ್ಷ ರೂ. ರೈತರಿಗೆ ಬೆಳೆನಾಶದ ಪರಿಹಾರ ನೀಡಿದೆ. ಆದರೆ, 293 ರೈತರ 23,02,631 ರೂ. ಪರಿಹಾರದ ಹಣ ಈವರೆಗೂ ಬಂದಿಲ್ಲ.

ಸಾಕುಪ್ರಾಣಿಗಳು ವನ್ಯಜೀವಿಗಳ ದಾಳಿಗೆ ಹಳಿಯಾಳ ಜೋಯಿಡಾ ಭಾಗದಲ್ಲಿ ಒಟ್ಟು 198 ಸಾವಾಗಿದೆ. ಇದರಲ್ಲಿ ಭಾಗವತಿ ಭಾಗದಲ್ಲಿ 55 ಸಾಕುಪ್ರಾಣಿಗಳ ಸಾವು ಹೆಚ್ಚು ದಾಖಲಾಗಿದೆ. ಇವುಗಳಿಗೆ ಅರಣ್ಯ ಇಲಾಖೆ ನಿಗದಿ ಮಾಡಿದ ಮೊತ್ತ 40,08,190 ರೂ. ಆದರೆ, ಪರಿಹಾರ ನೀಡಿದ್ದು 10,20,000 ರೂ. ಮಾತ್ರ . ಉಳಿದ 29,88,190 ರೂ. ಹಣ ಬಾಕಿ ಉಳಿದಿದೆ. ಎಷ್ಟೇ ಆನೆಗಳನ್ನು ಓಡಿಸಿದ್ರೂ ರಾತ್ರಿ-ಹಗಲು ಎನ್ನದೇ ರೈತರ ತೋಟಕ್ಕೆ ಗುಳೆ ಇಡುತ್ತಿವೆ. ಹೀಗಾಗಿ, ಪರಿಹಾರ ತಕ್ಷಣ ನೀಡಬೇಕು ಎಂಬುದು ರೈತರ ಆಗ್ರಹಿಸಿದ್ದಾರೆ.
ಕಾಡುಪ್ರಾಣಿಗಳ ಅದರಲ್ಲೂ ಆನೆಗಳ ಉಪಟಳ ತಪ್ಪಿಸಲು ಕೃಷಿ ಭೂಮಿಯ ಸುತ್ತಲೂ ನಿಂಬೆಗಿಡ ನಡೆಬೇಕು. ಪ್ರಾಣಿ ಓಡಿಸುವ ಧ್ವನಿ ಬರುವ ಡಿವೈಸ್ ಬಳಸಲು ಕಾಳಿ ಹುಲಿ ರಕ್ಷಿತಾರಣ್ಯದ ಡಿಎಫ್‌ಓ ಎಮ್‌ಎಸ್ ಹರಳೀಮಠ್ ಅವರು ಸಲಹೆ ನೀಡಿದ್ದಾರೆ. ಕಳೆದ ಐದಾರು ವರ್ಷಕ್ಕೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆನೆಗಳ ಹಾವಳಿ ಮಿತಿ ಮೀರಿತ್ತಿದೆ. ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ 40 ಕ್ಕೂ ಹೆಚ್ಚು ಆನೆಗಳು ಆಶ್ರಯ ಪಡೆದಿವೆ.
ಭದ್ರಾ ಅಭ್ಯಯಾರಣ್ಯದಿಂದಲೂ ಅಹಾರ ಅರಸಿ ಆನೆಗಳ ಹಿಂಡುಸಿದ್ದಾಪುರ, ಬನವಾಸಿ, ಶಿರಸಿ, ಮುಂಡಗೋಡು, ಯಲ್ಲಾಪುರ ಮೂಲಕ ಕಾಳಿ ಹುಲಿ ರಕ್ಷಿತಾರಣ್ಯಕ್ಕೆ ಗುಳೆ ಇಡುತ್ತಿವೆ. ಕಾಡಿನ ಆಹಾರಕ್ಕೆ ಸೀಮಿತವಾಗಿದ್ದ ಈ ಆನೆಗಳು ಇದೀಗ ಕಬ್ಬು, ಭತ್ತ, ಅಡಿಕೆ ಬೆಳೆಯ ರುಚಿ ನೋಡಿವೆ. ನೀರು ಆಹಾರ ಸುಲಭವಾಗಿ ನಾಡಿನಲ್ಲಿ ಸಿಗುತ್ತಿದ್ದು, ಇದರಿಂದ ಆನೆಗಳು ಇತ್ತೀಚೆಗೆ ಹೆಚ್ಚು ಜನರಿರುವ ಪ್ರದೇಶಕ್ಕೆ ಗುಳೆ ಇಡುತ್ತಿವೆ. ಹೀಗೆ, ಗುಳೆ ಬಂದ ಆನೆಗಳು ಮಾನವನ ಕೆಟ್ಟತನಕ್ಕೆ ಬಲಿಯಾಗುತ್ತಿವೆ.
ಬೆಳಗಾವಿ ಗಡಿಯಲ್ಲಿ ಭತ್ತದ ಗದ್ದೆಗೆ ಹಾಕಿದ್ದ ವಿದ್ಯುತ್ ತಂತಿ ತಗಲಿ ಆನೆ ಬಲಿಯಾದರೆ, ಕುಳಗಿಯಲ್ಲಿ ಆನೆ ಬಿಡಾರದ ಆನೆಯೇ ವಿದ್ಯುತ್ ಶಾಕ್‌ನಿಂದ ಸಾವು ಕಂಡಿತ್ತು. ಇದೇ ಬಿಡಾರದ ಮರಿಯಾನೆ ಸಹ ಸ್ಥಳೀಯ ಆಹಾರ ಸೇವಿಸಿ ಉದರ ಸಮಸ್ಯೆಯಿಂದ ಮೃತಪಟ್ಟಿದೆ. ಕೇವಲ ಆನೆಗಳಲ್ಲದೆ ಇತರ ಪ್ರಾಣಿಗಳೂ ನಾಡಿನತ್ತ ಬರುತ್ತಿವೆ. ಈವರೆಗೆ ವನ್ಯಜೀವಿಗಳಿಂದ ಒಂದು ವರ್ಷದಲ್ಲಿ 198 ಸಾಕು ಪ್ರಾಣಿಗಳ ಸಾವಾಗಿದೆ.
49 ಸಾಕುಪ್ರಾಣಿಗಳ ಸಾವಿನ ಪರಿಹಾರ ಈವರೆಗೂ ಬಂದಿಲ್ಲ. ಇತರೆ ಭಾಗದ ರಕ್ಷಿತಾರಣ್ಯಕ್ಕೆ ಹೋಲಿಸಿದರೆ ಮಾನವನ ಹತ್ಯೆ ಶೂನ್ಯವಿದೆ. ಒಂದು ವರ್ಷದಲ್ಲಿ ಓರ್ವ ವ್ಯಕ್ತಿ ಮಾತ್ರ ವನ್ಯಜೀವಿ ದಾಳಿಗೆ ಗಾಯಗೊಂಡಿದ್ದು, ಆತನಿಗೆ ಅರಿಹಾರ ನೀಡಲಾಗಿದೆ. ಆನೆಗಳ ಜೊತೆ ಕರಡಿ, ಹುಲಿ ದಾಳಿಯಾಗುತ್ತಿದ್ದು, ಅರಣ್ಯ ಇಲಾಖೆ ಮಾತ್ರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ದೂರು.
ಆನೆಗಳು ಯಾವ ಭಾಗದಲ್ಲಿ ಸಂಚರಿಸುತ್ತವೆ, ಎಲ್ಲಿರುತ್ತವೆ ಎಂದು ನೋಡಲು ಆನೆ ಮೇಲುಸ್ತುವಾರಿ ತಂಡವಿದೆ. ಈ ತಂಡ ಯಾವಾಗ ಎಲ್ಲಿ ಆನೆಗಳು ಬರುತ್ತವೆ, ಹೋಗುತ್ತವೆ ಎಂಬುದನ್ನ ಮೇಲುಸ್ತುವಾರಿ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡುತ್ತದೆ. ಸದ್ಯ ಈಗಿರುವ ಮಾಹಿತಿ ಪ್ರಕಾರ, ಕಾಳಿ ಅಭಯಾರಣ್ಯ ವ್ಯಾಪ್ತಿಗೆ ಭದ್ರಾ ಅಭಯಾರಣ್ಯ ಭಾಗದಿಂದ ಆನೆಗಳ ಹಿಂಡು ಸೊರಬ ಮೂಲಕ ಬನವಾಸಿ ಮಾರ್ಗವಾಗಿ ಯಲ್ಲಾಪುರ, ದಾಂಡೇಲಿಯತ್ತ ಸಾಗುತ್ತಿದೆ.
ಈ ಹಿಂಡು ಕಾಳಿ ಅಭಯಾರಣ್ಯ ಸೇರಲಿವೆ. ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳ ಸಂಖ್ಯೆ ವೃದ್ಧಿಯಾಗುವ ಜೊತೆ ಗುಳೆಬರುವ ಆನೆಗಳ ಹಿಂಡು ಸಹ ಹೆಚ್ಚಾಗಿದೆ. ಅರಣ್ಯ ಇಲಾಖೆ ಇವುಗಳ ಮಾನಿಟರಿಂಗ್ ಮಾಡುತ್ತಿದ್ದಾರೆ. ಆದರೆ, ಆಹಾರ ಅರಸಿ ನಾಡಿನತ್ತ ಬರುವ ಆನೆಗಳು ತೋಟ, ಗದ್ದೆಯನ್ನ ನಾಶ ಮಾಡಿದ್ರೆ, ರೈತ ಬೆಳದ ಬೆಳೆ ನಾಶವಾಗುತ್ತಿದ್ದು, ಪರಿಹಾರವೇ ದೊಡ್ಡ ಸಮಸ್ಯೆಯಾಗಿದೆ.















