ಮನೆ ಕಾನೂನು ದೆಹಲಿ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಕೋಟಿ-ಕೋಟಿ ಹಣ: ಹೊಸ ಟ್ವಿಸ್ಟ್

ದೆಹಲಿ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಕೋಟಿ-ಕೋಟಿ ಹಣ: ಹೊಸ ಟ್ವಿಸ್ಟ್

0

ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದ ಸಮಯದಲ್ಲಿ ಲೆಕ್ಕಕ್ಕೆ ಸಿಗದ ಭಾರೀ ಪ್ರಮಾಣದ ಹಣ ಪತ್ತೆಯಾಗಿತ್ತು ಎಂಬ ವರದಿಯನ್ನು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅತುಲ್ ಗಾರ್ಗ್ ತಳ್ಳಿ ಹಾಕಿದ್ದಾರೆ.

ನ್ಯಾಯಾಧೀಶರ ಮನೆಯಲ್ಲಿ ಬೆಂಕಿ ನಂದಿಸುವಲ್ಲಿ ವೇಳೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಾವುದೇ ಹಣ ಪತ್ತೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ಮಾರ್ಚ್ ೧೪ ರಂದು ರಾತ್ರಿ ೧೧.೩೫ ಗಂಟೆಗೆ ವರ್ಮಾ ಅವರ ದೆಹಲಿಯ ಲುಟ್ಯೆನ್ಸ್ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ನಿಯಂತ್ರಣ ಕೊಠಡಿಗೆ ಕರೆ ಬಂದಿತ್ತು. ತಕ್ಷಣವೇ ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದವು.

ರಾತ್ರಿ ೧೧-೪೩ಕ್ಕೆ ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ತೆರಳಿದವು. ಸ್ಟೇಷನರಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸಿದ ಸ್ಟೋರ್ ರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ೧೫ ನಿಮಿಷಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಂದಿಸಲಾಯಿತು. ಆದರೆ ಯಾವುದೇ ಸಾವು- ನೋವು ಕಂಡುಬರಲಿಲ್ಲ ಎಂದು ಎಂದು ಅತುಲ್ ಗಾರ್ಗ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಬೆಂಕಿಯ ಜ್ವಾಲೆಯನ್ನು ನಂದಿಸಿದ ನಂತರ, ಬೆಂಕಿಯ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ತದನಂತರ ಅಗ್ನಿಶಾಮಕ ತಂಡವು ಸ್ಥಳದಿಂದ ತೆರಳಿತು. ಅಗ್ನಿ ನಂದಿಸುವ ಕಾರ್ಯಾಚರಣೆಯಲ್ಲಿ ಯಾವುದೇ ಹಣ ನಮ್ಮ ಸಿಬ್ಬಂದಿಯ ಗಮನಕ್ಕೆ ಬಂದಿಲ್ಲ ಎಂದು ಅವರು ಸ್ಪಷ್ಪಪಡಿಸಿದ್ದಾರೆ.

ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ನ್ಯಾಯಾಧೀಶ ವರ್ಮಾ ಅವರ ಅಧಿಕೃತ ನಿವಾಸದಿಂದ ಭಾರೀ ಪ್ರಮಾಣದಲ್ಲಿ ನಗದು ಪತ್ತೆಯಾಗಿದೆ ಎಂಬುದರ ವಿರುದ್ಧ ಶುಕ್ರವಾರ ಆರಂಭಿಕ ವಿಚಾರಣೆ ಪ್ರಾರಂಭಿಸಿದ ಸುಪ್ರಿಂ ಕೋರ್ಟ್ ಕೊಲಿಜಿಯಂ, ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡುವಂತೆಯೂ ಸೂಚಿಸಿರುವುದಾಗಿ ವರದಿಯಾಗಿತ್ತು.