ಬೆಂಗಳೂರು: ರಾಜ್ಯದ ಜನತೆಗೆ ಸತ್ಯಸಂಧ ಭ್ರಷ್ಟಾಚಾರ ವಿರೋಧಿ ಹೋರಾಟದ ಚಿಹ್ನೆಯಾದ ಲೋಕಾಯುಕ್ತ ಸಂಸ್ಥೆಯಲ್ಲೇ ಇದೀಗ ಭಾರೀ ಹಗರಣ ಬಯಲಾಗಿದ್ದು, ಇಬ್ಬರು ಐಪಿಎಸ್ ಅಧಿಕಾರಿಗಳು ನೇರವಾಗಿ ಹಣದ ದಂಧೆಯಲ್ಲಿ ತೊಡಗಿದ್ದ ಮಾಹಿತಿಯು ಬೆಚ್ಚಿ ಬೀಳಿಸುವಂತಿದೆ.
ಲೋಕಾಯುಕ್ತದಲ್ಲಿ ಕೆಲಸ ಮಾಡುತ್ತಿದ್ದ ಕೆಲ ಅಧಿಕಾರಿಗಳು, ತಮ್ಮ ಅಧಿಕಾರದ ಹುದ್ದೆ ದುರ್ಬಳಕೆ ಮಾಡಿಕೊಂಡು, ಸರ್ಕಾರಿ ಅಧಿಕಾರಿಗಳಿಗೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿ ಕೋಟ್ಯಾಂತರ ರೂಪಾಯಿ ಹಣವನ್ನು ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ. ದಾಳಿಯ ಹೆಸರಿನಲ್ಲಿ ಪ್ರಭಾವ ಬೀರುವ ಮೂಲಕ ಕೆಲವರ ನೆರವಿನಿಂದ ಮತ್ತು ಏಜೆಂಟ್‌ಗಳ ಮೂಲಕ ಈ ಹಣದ ದಂಧೆ ನಡೆಸಲಾಗಿತ್ತು.
ಹಣವನ್ನು ನೇರವಾಗಿ ಸ್ವೀಕರಿಸದ ಈ ತಂಡ, ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡಿದ್ದು, ಹಣದ ಸುಳಿವು ಲಭ್ಯವಾಗದಂತೆ ಮಾಡಲು ಪ್ರಯತ್ನಿಸಿದ್ದಂತೂ ಸ್ಪಷ್ಟವಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ದೃಢ ಸಾಕ್ಷ್ಯಗಳು ಇದೀಗ ಲಭ್ಯವಿದ್ದು, ಇದು ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸುತ್ತದೆ.
ಶ್ರೀನಾಥ್ ಜೋಶಿ: ಲೋಕಾಯುಕ್ತದ ಎಸ್ಪಿಯಾಗಿ ಸೇವೆ ನೀಡುತ್ತಿದ್ದ ಜೋಶಿ, ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಣ ವಸೂಲಿ ಮಾಡುತ್ತಿದ್ದ ನಿಂಗಪ್ಪ ಎಂಬ ಏಜೆಂಟ್ ಜೋಶಿಯೊಂದಿಗೆ ನೇರ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಬಂದಿದೆ. ನಿಂಗಪ್ಪ: ಅಬಕಾರಿ ಇಲಾಖೆ ಅಧಿಕಾರಿಗಳಿಂದ ಹಣವನ್ನು ವಸೂಲಿ ಮಾಡುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತದ ಪೊಲೀಸರಿಂದಲೇ ಟ್ರ್ಯಾಪ್ ಆಗಿದ್ದಾನೆ.
ಈ ಹಗರಣ ಬಹಿರಂಗವಾದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಶ್ರೀನಾಥ್ ಜೋಶಿಯನ್ನು ತಕ್ಷಣವೇ ಎತ್ತಂಗಡಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ, ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಇನ್ನಷ್ಟು ಮಂದಿ ಅಧಿಕಾರಿಗಳ ಹೆಸರುಗಳು ಹೊರಬರಲಿವೆ ಎನ್ನುವ ಮಾಹಿತಿ ಇದೆ.















