ನವದೆಹಲಿ (New Delhi): ಭಾರತಕ್ಕೆ ಪೂರೈಕೆ ಆಗುವ ಕಚ್ಚಾ ತೈಲದ ಬೆಲೆಯು ಒಂದು ದಶಕದ ಗರಿಷ್ಠ ಮಟ್ಟ ತಲುಪಿದೆ. ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 121 ಅಮೆರಿಕನ್ ಡಾಲರ್ ಆಗಿದೆ. ಆದರೆ, ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಆಗಿಲ್ಲ.
ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ 121.28 ಡಾಲರ್ ಆಗಿದ್ದು, 2012ರ ಫೆಬ್ರುವರಿ, ಮಾರ್ಚ್ ತಿಂಗಳಿನಲ್ಲಿಯೂ ಕಚ್ಚಾ ತೈಲದ ಬೆಲೆಯು ಇದೇ ಮಟ್ಟದಲ್ಲಿ ಇತ್ತು ಎಂದು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಘಟಕದ (ಪಿಪಿಎಸಿ) ಅಂಕಿ–ಅಂಶಗಳು ಹೇಳಿವೆ.
ರಷ್ಯಾ ದೇಶವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ನಂತರದಲ್ಲಿ, ಫೆಬ್ರುವರಿ 25ರಿಂದ ಮಾರ್ಚ್ 29ರವರೆಗಿನ ಅವಧಿಯಲ್ಲಿ ಭಾರತಕ್ಕೆ ಪೂರೈಕೆಯಾಗುವ ಕಚ್ಚಾ ತೈಲದ ಬೆಲೆಯು ಬ್ಯಾರೆಲ್‌ಗೆ ಸರಾಸರಿ 111.86 ಡಾಲರ್ ಆಗಿತ್ತು ಎಂದು ಪಿಪಿಎಸಿ ಹೇಳಿದೆ. ಮಾರ್ಚ್ 30ರಿಂದ ಏಪ್ರಿಲ್ 27ರವರೆಗೆ ಅದರ ಸರಾಸರಿ ಬೆಲೆಯು 103.44 ಡಾಲರ್ ಆಗಿತ್ತು.
ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಾದ ಐಒಸಿ, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ನಿಯಮದ ಅನ್ವಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿದಿನವೂ ಪರಿಷ್ಕರಿಸಬೇಕು. ಆದರೆ, ಕಳೆದ ವರ್ಷದ ನವೆಂಬರ್‌ನಿಂದ ಈ ಕಂಪನಿಗಳು ಬೆಲೆಯ ಮೇಲೆ ನಿಯಂತ್ರಣ ಹೇರಿವೆ.