ದಟ್ಟ ಮಂಜಿನಿಂದಾಗಿ ಕ್ರೂಸರ್ ಕಾಲುವೆಗೆ ಉರುಳಿರುವ ಘಟನೆ ಹರ್ಯಾಣದ ಫತೇಹಾಬಾದ್ ನಲ್ಲಿ ನಡೆದಿದೆ.
ಕ್ರೂಸರ್ ನಲ್ಲಿ 12 ಮಂದಿ ಪ್ರಯಾಣಿಸುತ್ತಿದ್ದರು. 10 ಮಂದಿ ನಾಪತ್ತೆಯಾಗಿದ್ದಾರೆ. 10 ವರ್ಷದ ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. 55 ವರ್ಷ ವಯಸ್ಸಿನ ವ್ಯಕ್ತಿಯ ದೇಹ ಸಿಕ್ಕಿದೆ.
ಪಂಜಾಬ್ ನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿ ಪ್ರಯಾಣಿಕರು ಹಿಂತಿರುಗುತ್ತಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಸರ್ದಾರೆವಾಲಾ ಗ್ರಾಮದ ಬಳಿ ಸೇತುವೆ ದಾಟುತ್ತಿದ್ದಾಗ ದಟ್ಟ ಮಂಜು ಕವಿದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ವಾಹನ ಸೇತುವೆಯಿಂದ ಆಯತಪ್ಪಿ ಕಾಲುವೆಗೆ ಬಿದ್ದಿದೆ.
ವಾಹನದ ಚಾಲಕನನ್ನು ಜರ್ನೈಲ್ ಸಿಂಗ್ ಎಂದು ಗುರುತಿಸಲಾಗಿದ್ದು, ವಾಹನವು ನೀರಿನಲ್ಲಿ ಮುಳುಗುವ ಮುನ್ನವೇ ವಾಹನದಿಂದ ಜಿಗಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕಾಲುವೆಗೆ ಬಿದ್ದಾಗ ಇತರ 12 ಪ್ರಯಾಣಿಕರು ವಾಹನದೊಳಗೆ ಇದ್ದರು. ರಕ್ಷಣಾ ತಂಡಗಳು 10 ವರ್ಷದ ಅರ್ಮಾನ್‌ನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, 55 ವರ್ಷದ ಬಲ್ಬೀರ್ ಸಿಂಗ್ ಅವರ ದೇಹವನ್ನು ಕಾಲುವೆಯಿಂದ ಹೊರತೆಗೆಯಲಾಯಿತು.
ಅಪಘಾತದ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು, ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು. ಮುಳುಗುಗಾರರು ಮತ್ತು ರಕ್ಷಣಾ ಸಿಬ್ಬಂದಿ ರಾತ್ರಿಯಿಡೀ ಶೋಧ ಮುಂದುವರೆಸಿದರು.