ಬೆಂಗಳೂರು: ಜಿಜಿಒ ಹೆಸರಿನ ಕ್ರಿಪ್ಟೋಕರೆನ್ಸಿ ಸಂಸ್ಥೆಯಲ್ಲಿ ಮೋಸದ ಹೂಡಿಕೆ ಯೋಜನೆ ಮೂಲಕ ಸಾರ್ವಜನಿಕರಿಗೆ ವಂಚಿಸಿದ ಆರೋಪದ ಮೇಲೆ ಅಪ್ಪ ಮತ್ತು ಮಗ ಸೇರಿದಂತೆ ಮೂವರನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಸತೀಶ್, ಅವರ ಪುತ್ರ ಶ್ರೀಕಾಂತ್ ಮತ್ತು ದೀಪಕ್ ಎಂಬುವವರು ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಜಿಜಿ ಆನ್‌ಲೈನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯನ್ನು ನಡೆಸುತ್ತಿದ್ದರು. ಹೆಚ್ಚಿನ ಆದಾಯ ನೀಡುವುದಾಗಿ ಭರವಸೆ ನೀಡಿ 1,300 ಮಂದಿಗೆ 5-6 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜಿಜಿಒ ಕಂಪನಿಯ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ಮಾಡಲಾಗಿದೆ. ಜಿಜಿಒ ಕಂಪನಿಯು ಅಂತಾರಾಷ್ಟ್ರೀಯ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರಗಳಲ್ಲಿ ಪಟ್ಟಿಮಾಡಿದರೆ ಬಿಟ್‌ಕಾಯಿನ್‌ಗೆ ಹೋಲಿಸಬಹುದಾದ, ಹೆಚ್ಚು ಬೆಲೆಬಾಳುವ ಸಾಮರ್ಥ್ಯವನ್ನು ಹೊಂದಿದೆ. ಇದು ಹೆಚ್ಚಿನ ಆದಾಯ ನೀಡುತ್ತದೆ ಎಂದು ಜನರನ್ನು ಆಕರ್ಷಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಹೂಡಿಕೆದಾರರ ನಂಬಿಕೆಯನ್ನು ಗಳಿಸಿದರು. ಅವರ ಹೂಡಿಕೆಗಳಿಗೆ ಪ್ರತಿಫಲವಾಗಿ ಆರಂಭದಲ್ಲಿ ಪ್ರತಿದಿನ ಶೇ 15 ರಷ್ಟು ಆದಾಯ ಪಾವತಿಸಿದ್ದಾರೆ. ಹೂಡಿಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಈ ಯೋಜನೆಯನ್ನು ಪ್ರಚಾರ ಮಾಡಿದ ನಂತರ, ಅವರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಸಂಬಂಧಿಕರು ಹೂಡಿಕೆ ಮಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.