ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 29ನೇ ಪಂದ್ಯದಲ್ಲಿ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ.
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಟಾಸ್ ಗೆದ್ದಿರುವ ಚೆನ್ನೈ, ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಈಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಜಯಸಿತ್ತು. ತಂಡದ ಆರಂಭಿಕ ಜೋಡಿ ಡೇವೊನ್ ಕಾನ್ವೆ ಹಾಗೂ ಋತುರಾಜ್ ಗಾಯಕವಾಡ್ ಉತ್ತಮ ಲಯದಲ್ಲಿದ್ದಾರೆ. ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಮತ್ತು ಮುಂಬೈನ ಬ್ಯಾಟರ್ ಶಿವಂ ದುಬೆ ಅವರ ಅಬ್ಬರದ ಆಟವೂ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಅಂಬಟಿ ರಾಯುಡು, ಮೋಯಿನ್ ಅಲಿ, ಧೋನಿ ಮತ್ತು ರವೀಂದ್ರ ಜಡೇಜ ಅವರು ಕೊನೆಯ ಹಂತದ ಓವರ್‌ಗಳಲ್ಲಿ ತಂಡದ ಮೊತ್ತಕ್ಕೆ ಒಂದಿಷ್ಟು ರನ್‌ಗಳ ಕಾಣಿಕೆ ನೀಡುವ ಸಮರ್ಥರು. ಆದರೆ ಚೆನ್ನೈಗೆ ಚಿಂತೆ ಇರುವುದು ಬೌಲಿಂಗ್ ವಿಭಾಗದಲ್ಲಿ ಮಾತ್ರ.
ಹೆಚ್ಚು ವೈಡ್‌ಗಳನ್ನು ಹಾಕುತ್ತಿರುವ ಬೌಲರ್‌ಗಳು ಲೈನ್ ಮತ್ತು ಲೆಂಗ್ತ್ ನಿರ್ವಹಿಸುವ ಸವಾಲು ಇದೆ. ಫೀಲ್ಡಿಂಗ್‌ನಲ್ಲಿಯೂ ಸುಧಾರಣೆ ಕಂಡುಕೊಂಡರೆ ತಂಡಕ್ಕೆ ಗೆಲುವಿನ ಹಾದಿ ಸುಗಮವಾಗಬಹುದು.
ಅದೇ ಹೈದರಾಬಾದ್ ತಂಡವು ಈಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧ ಪರಾಭವಗೊಂಡಿತ್ತು. ತಂಡವು ಆಡಿರುವ ಐದು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಜಯಿಸಿದೆ. ಇದರಿಂದಾಗಿ ಉಳಿದ ಪಂದ್ಯಗಳಲ್ಲಿ ಜಯ ಸಾಧಿಸುವುದು ಮುಖ್ಯವಾಗಿದೆ. ಆದ್ದರಿಂದ ಏಡನ್ ಮರ್ಕರಂ ಬಳಗವು ದಿಟ್ಟ ಹೋರಾಟ ತೋರುವ ನಿರೀಕ್ಷೆ ಇದೆ.
ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮಾ ವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ತಂಡದ ಹೋರಾಟಕ್ಕೆ ಬಲ ಬರುಬಹುದು. ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್ ಹಾಗೂ ಟಿ ನಟರಾಜನ್ ಅವರ ಮುಂದೆ ಚೆನ್ನೈನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲು ಇದೆ.
ತಂಡಗಳು ಇಂತಿವೆ…
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂ.ಎಸ್. ಧೋನಿ (ಕೀಪರ್, ನಾಯಕ), ಮಹೇಶ್ ತೀಕ್ಷಣ, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್, ಮತಿಶಾ ಪತಿರಾನ.
ಸನ್ರೈಸರ್ಸ್ ಹೈದರಾಬಾದ್: ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಅಭಿಷೇಕ್ ಶರ್ಮಾ, ವಾಷಿಂಗ್ಟನ್ ಸುಂದರ್, ಮಾರ್ಕೊ ಯಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಉಮ್ರಾನ್ ಮಲಿಕ್.