ಸಿಎಸ್ಆರ್ ನಿಧಿ ಹಗರಣದ ಆರೋಪ ಪಟ್ಟಿಯಿಂದ ನಿವೃತ್ತ ನ್ಯಾಯಮೂರ್ತಿ ಸಿ ಎನ್ ರಾಮಚಂದ್ರನ್ ನಾಯರ್ ಅವರ ಹೆಸರನ್ನು ಕೈ ಬಿಡುವಂತೆ ಪ್ರಕರಣದ ತನಿಖಾಧಿಕಾರಿಗಳಿಗೆ ಕೇರಳ ಹೈಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿ ನಾಯರ್ ಹೆಸರು ಕೈಬಿಡುವುದಾಗಿ ಕೇರಳ ಸರ್ಕಾರದ ಪ್ರಾಸಿಕ್ಯೂಷನ್ ಕಚೇರಿ ಹೇಳಿಕೆಯನ್ನು ಮಂಗಳವಾರ ದಾಖಲಿಸಿಕೊಂಡ ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಸ್ತಾಕ್ ಮತ್ತು ಪಿ ಕೃಷ್ಣ ಕುಮಾರ್ ಅವರಿದ್ದ ಪೀಠ ಈ ಹೇಳಿಕೆ ಆಧಾರದಲ್ಲಿ ಅವರ ಹೆಸರು ಹೊರಗಿಡುವಂತೆ ರಾಜ್ಯ ತನಿಖಾ ಸಂಸ್ಥೆಗಳಿಗೆ ಸೂಚಿಸಿತು.
ಕ್ರಿಮಿನಲ್ ಪ್ರಕರಣಗಳು ಉಂಟುಮಾಡಬಹುದಾದ ದೂರಗಾಮಿ ಪರಿಣಾಮಗಳನ್ನು ಪರಿಗಣಿಸಿ ಆ ಪ್ರಕರಣಗಳಲ್ಲಿ ಯಾವುದೇ ನ್ಯಾಯಮೂರ್ತಿಗಳನ್ನು ಹೆಸರಿಸುವ ಮೊದಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿ ರೂಪಿಸುವಂತೆ ನ್ಯಾಯಾಲಯ ರಾಜ್ಯದ ಗೃಹ ಇಲಾಖೆಗೆ ನಿರ್ದೇಶನ ನೀಡಿತು.
” ಯಾರೂ ಕಾನೂನಿಗಿಂತ ಮಿಗಿಲಲ್ಲ. ಆದರೆ ಅದೇ ಸಮಯದಲ್ಲಿ ಅಂತಹ ವ್ಯಕ್ತಿಗಳು (ನ್ಯಾಯಾಂಗ ಅಧಿಕಾರಿಗಳು ಅಥವಾ ನ್ಯಾಯಾಧೀಶರು) ಅಪರಾಧದಲ್ಲಿ ಭಾಗಿಯಾಗಿದ್ದರೆ, ಅದು ಸಂಸ್ಥೆಯ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಾರ್ವಜನಿಕರ ವಿಶ್ವಾಸವನ್ನು ಕಲಕುತ್ತದೆ ಎಂದು ನಾವು ಭಾವಿಸುತ್ತೇವೆ… ಅಂತಹ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಮಾರ್ಗಸೂಚಿ ರೂಪಿಸುವುದನ್ನು ಪರಿಗಣಿಸುವಂತೆ ರಾಜ್ಯದ ಗೃಹ ಇಲಾಖೆಯನ್ನು ವಿನಂತಿಸುತ್ತೇವೆ ” ಎಂದು ನ್ಯಾಯಾಲಯ ಆದೇಶಿಸಿತು.
ನ್ಯಾಯಮೂರ್ತಿ ರಾಮಚಂದ್ರನ್ ನಾಯರ್ ವಿರುದ್ಧ ಪ್ರಕರಣ ದಾಖಲಿಸುವುದನ್ನು ಪ್ರಶ್ನಿಸಿ ಐವರು ವಕೀಲರು ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಗಿದೆ.
“ಯಾರೂ ಕಾನೂನಿಗಿಂತ ಮೇಲಲ್ಲ ಆದರೆ ಅದೇ ಸಮಯದಲ್ಲಿ ಅಂತಹ ವ್ಯಕ್ತಿಗಳನ್ನು (ನ್ಯಾಯಮೂರ್ತಿಗಳು) ಅಪರಾಧದಲ್ಲಿ ಸಿಲುಕಿಸಿದರೆ, ಅದು ಸಂಸ್ಥೆಯ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅದು ನುಡಿಯಿತು.
ಬಹುಕೋಟಿ ಮೌಲ್ಯದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿ ಹಗರಣದಲ್ಲಿ ಮಾಜಿ ನ್ಯಾಯಮೂರ್ತಿ ನಾಯರ್ ಅವರನ್ನು ಈ ಹಿಂದೆ ಹೆಸರಿಸಲಾಗಿತ್ತು. ಮಹಿಳೆಯರಿಗೆ ಅರ್ಧ ಬೆಲೆಗೆ ದ್ವಿಚಕ್ರ ವಾಹನಗಳನ್ನು ನೀಡುವುದಾಗಿ ಭರವಸೆ ನೀಡಿ ಪ್ರಮುಖ ಆರೋಪಿ ಅನಂತು ಕೃಷ್ಣನ್ ಕೋಟ್ಯಂತರ ಹಣ ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಸ್ಕೂಟರ್‌ನ ಉಳಿದ ಮೊತ್ತವನ್ನು ವಿವಿಧ ಕಂಪೆನಿಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ (ಸಿಎಸ್‌ಆರ್) ಭರಿಸುವುದಾಗಿ ಆತ ಹೇಳಿಕೊಂಡಿದ್ದ ಎಂದು ದೂರಲಾಗಿತ್ತು. ಕೃಷ್ಣನ್ ಅವರಿಂದ ವಂಚನೆಗೊಳಗಾದ ಅನೇಕರು ಕೇರಳದ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು.
ಇದೇ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಲ್ಯಾಲಿ ವಿನ್ಸೆಂಟ್ ಅವರಿಗೆ ಕೇರಳ ಹೈಕೋರ್ಟ್ ನಿನ್ನೆ (ಸೋಮವಾರ) ನಿರೀಕ್ಷಣಾ ಜಾಮೀನು ನೀಡಿತ್ತು. ಪ್ರಮುಖ ಆರೋಪಿಯಿಂದ ಗಣನೀಯ ಮೊತ್ತದ ಹಣವನ್ನು ಲ್ಯಾಲಿ ಪಡೆದಿದ್ದಾರೆ ಎಂಬ ರಾಜ್ಯ ಸರ್ಕಾರದ ವಾದ ತಿರಸ್ಕರಿಸಿದ ನ್ಯಾಯಾಲಯ ವೃತ್ತಿಪರ ಶುಲ್ಕವಾಗಿ ವಕೀಲರೊಬ್ಬರಿಗೆ ಇಷ್ಟೇ ಮೊತ್ತದ ಹಣ ಪಡೆಯಬೇಕು ಎಂದು ತಾನು ಹೇಳಲಾಗದು ಎಂದಿತ್ತು. ತನ್ನ ಈ ಅಭಿಪ್ರಾಯ ಲ್ಯಾಲಿ ಅವರಿಗೆ ನಿರೀಕ್ಷಣಾ ಜಾಮೀನು ನೀಡುವುದಕ್ಕೆ ಸಂಬಂಧಿಸಿದೆಯೇ ವಿನಾ ಪ್ರಕರಣದ ತನಿಖೆ ಮೇಲೆ ಪ್ರಭಾವ ಬೀರದು ಎಂದು ಅದು ಇದೇ ವೇಳೆ ಸ್ಪಷ್ಟಪಡಿಸಿತ್ತು.
ನ್ಯಾ. ನಾಯರ್, ಲ್ಯಾಲಿ ಅವರಲ್ಲದೆ ವಿಧಾನಪರಿಷತ್ ಸದಸ್ಯ ನಜೀಬ್ ಕಾಂತಪುರಂ, ಬಿಜೆಪಿ ನಾಯಕ ಎ.ಎನ್. ರಾಧಾಕೃಷ್ಣನ್ ನೇತೃತ್ವದ ಸರ್ಕಾರೇತರ ಸಂಸ್ಥೆಯನ್ನೂ ಪ್ರಕರಣದಲ್ಲಿ ಆರೋಪಿಗಳು ಎಂದು ಹೆಸರಿಸಲಾಗಿತ್ತು.















