ಮನೆ ರಾಜ್ಯ ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಕರೆ

ವೈಜ್ಞಾನಿಕತೆ ಮತ್ತು ವೈಚಾರಿಕತೆ ಬೆಳೆಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಕರೆ

0

ಬೆಂಗಳೂರು: ಅಧಿಕಾರಕ್ಕಾಗಿ ರಾಜಕೀಯ ಅಲ್ಲ. ಸೇವಾ ಮನೋಭಾವ ಇದ್ದವರು ಮಾತ್ರ ರಾಜಕಾರಣಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಚಂದ್ರಾಲೇಔಟ್ ನ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಮತ್ತು ನಾನಾ ಕ್ಷೇತ್ರಗಳ ಸಾಧಕರನ್ನು ಪುರಸ್ಕರಿಸಿ ಮಾತನಾಡಿದರು.

ಸಮಾಜದ ಪ್ರಗತಿ ಮತ್ತು ಬೆಳವಣಿಗೆಗೆ ಸೇವಾ ಮನೋಭಾವದ ರಾಜಕಾರಣಿಗಳ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಸೇವಾ ಮನೋಭಾವ ಕಡಿಮೆಯಾಗುತ್ತಿದೆ ಎಂದು ವಿಷಾ಼ದ ವ್ಯಕ್ತಪಡಿಸಿದರು.

ಪ್ರತಿಭೆ-ಅವಕಾಶ-ಶೈಕ್ಷಣಿಕ ವಾತಾವರಣ ಹಾಗೂ ಪೋಷಕರ ಸಹಕಾರ ಇದ್ದಾಗ ಮಾತ್ರ ಪ್ರತಿಭಾವಂತರು ಸಾಧನೆ ಮಾಡಲು ಸಾಧ್ಯ ಎಂದರು.

ಮಕ್ಕಳು ವೈಜ್ಞಾನಿಕತೆ, ವೈಚಾರಿಕತೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಾವು ನಾಗರಿಕರಾಗಲು, ಮಾನವೀಯಗೊಳ್ಳಲು ಸಾಧ್ಯ. ಸಮಾಜದ ಹಲವು ಸಮಸ್ಯೆಗಳಿಗೆ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವದಲ್ಲಿ ಪರಿಹಾರ ಇದೆ ಎಂದರು.‌

ನಾವು ಪಡೆದ ಅಂಕಗಳು, ಹುದ್ದೆ ಮತ್ತು ಆಸ್ತಿ ಎಲ್ಲಕ್ಕಿಂತ ಮುಖ್ಯವಾದುದು ಮಾನವೀಯತೆ ಮತ್ತು ವೈಚಾರಿಕತೆ ದೊಡ್ಡದು. ಮಾನವೀಯತೆ ಇಲ್ಲದಿದ್ದರೆ ಪಡೆದ ಅಂಕಗಳು, ಹುದ್ದೆಗಳೆಲ್ಲಾ ನಿಷ್ಪ್ರಯೋಜಕ ಎಂದರು.

ಶ್ರೀನಿರಂಜನಾನಂದಪುರಿ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಶಿವಾನಂದಪುರಿ ಮಹಾ ಸ್ವಾಮಿಗಳು, ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು, ಈಶ್ವರಾನಂದಪುರಿ ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಶಾಸಕರಾದ ಪ್ರಿಯಕೃಷ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೊಪ್ಪಳ ವಿವಿ ಕುಲಸಚಿವರಾದ ಡಾ.ಬಿ.ಕೆ.ರವಿ, ರಾಜ್ಯ ಕುರುಬರ ಸಂಘದ ಅಧ್ಯಕ್ಷರಾದ ಸುಬ್ರಮಣಿಯವರು ಸೇರಿ ಹಲವು ಗಣ್ಯರು ವೇದಿಕೆಯಲ್ಲಿದ್ದರು.