ಸೀತಾಫಲವನ್ನು ಇಂಗ್ಲಿಷ್ ನಲ್ಲಿ “ಕಸ್ಟರ್ಡ್ ಆಪಲ್” ಎಂದು ಕರೆಯಲಾಗುತ್ತದೆ. ಇದು ಭಾರತೀಯ ಉಪಖಂಡದ ಪ್ರಸಿದ್ಧ ಹಣ್ಣಾಗಿದ್ದು, ಇದರಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳು ಅಡಗಿವೆ. ಸೀತಾಫಲ ಮಾತ್ರವಲ್ಲದೆ ಅದರ ಎಲೆಗಳು ಸಹ ಹಲವಾರು ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಆಯುರ್ವೇದದಲ್ಲಿ ಸೀತಾಫಲ ಎಲೆಗಳನ್ನು ತುಂಬಾ ಉಪಯುಕ್ತವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಸೀತಾಫಲದ ಎಲೆಗಳನ್ನು ಜ್ಯೂಸ್, ಕಷಾಯ ಅಥವಾ ಚಹಾದ ರೂಪದಲ್ಲಿ ನೀವು ಸೇವಿಸಬಹುದು. ಇದರಿಂದ ದೇಹಕ್ಕೆ ಹಲವಾರು ಪೋಷಕಾಂಶಗಳು ದೊರೆಯುತ್ತದೆ ಮತ್ತು ನೀವು ಅನೇಕ ಆರೋಗ್ಯ ಲಾಭವನ್ನು ಪಡೆಯಬಹುದು. ಹಾಗಿದ್ದರೆ ಸೀತಾಫಲ ಎಲೆಗಳು ನಮ್ಮ ಆರೋಗ್ಯಕ್ಕೆ ಎಷ್ಟು ಉಪಯುಕ್ತ ಎಂಬುದನ್ನು ತಿಳಿಯೋಣ.
ಸೀತಾಫಲ ಎಲೆಗಳ ಆರೋಗ್ಯ ಪ್ರಯೋಜನಗಳು:
ಸೀತಾಫಲ ಎಲೆಗಳಲ್ಲಿ ಹಲವು ಪೋಷಕಾಂಶಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ವಿಟಮಿನ್ ಎ ಜೊತೆಗೆ ವಿಮಿನ್ ಬಿ, ವಿಟಮಿನ್ ಸಿ, ಕಬ್ಬಿಣ, ಫೈಬರ್ ಮತ್ತು ಕ್ಯಾಲ್ಸಿಯಂ ಸಹ ಇದರಲ್ಲಿ ಕಂಡುಬರುತ್ತದೆ. ಅಲ್ಲದೆ ಇದರಲ್ಲಿ ಅನೇಕ ಆಂಟಿಆಕ್ಸಿಡೆಂಟ್ ಅಂಶಗಳಿದ್ದು, ಇದು ದೇಹದಲ್ಲಿರುವ ಫ್ರೀ ರಾಡಿಕಲ್ ವಿರುದ್ಧ ಹೋರಾಡಿ ದೇಹವನ್ನು ಅನೇಕ ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಇದು ದೇಹದಲ್ಲಿನ ಊತ ಮತ್ತು ನೋವಿನಿಂದ ಪರಿಹಾರವನ್ನು ಒದಗಿಸುತ್ತದೆ.
ಮಧುಮೇಹ ಕಾಯಿಲೆಗೆ ಪರಿಹಾರವನ್ನು ನೀಡುತ್ತದೆ:
ಸೀತಾಫಲ ಎಲೆಗಳಲ್ಲಿ ಇರುವ ನಾರಿನಾಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಇದರಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ.
ಅತಿಸಾರ ಸಮಸ್ಯೆಯಿಂದ ಪರಿಹಾರವನ್ನು ಒದಗಿಸುತ್ತದೆ:
ಸೀತಾಫಲದ ಎಲೆಗಳನ್ನು ಸೇವಿಸುವುದರಿಂದ ಅನೇಕ ಹೊಟ್ಟೆ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ. ಸೀತಾಫಲ ಎಲೆಗಳು ಟ್ಯಾನಿನ್ ಎಂಬ ಕಿಣ್ವವನ್ನು ಹೊಂದಿದ್ದು, ಇದು ಅತಿಸಾರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ಎಲೆಯಲ್ಲಿರುವ ನಾರಿನಾಂಶವು ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಗ್ಯಾಸ್ ಅಸಿಡಿಟಿಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.
ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಪರಿಹಾರವನ್ನು ಒದಗಿಸುತ್ತದೆ:
ಸೀತಾಫಲ ಎಲೆಗಳಲ್ಲಿ ಪೊಟ್ಯಾಸಿಯಂ ಮತ್ತು ಮೆಗ್ನೇಷಿಯಂನಂತಹ ಪೋಷಕಾಂಶಗಳು ಕಂಡುಬರುತ್ತವೆ. ಇದು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಪರಿಹಾರವನ್ನು ಒದಗಿಸುತ್ತದೆ. ಅಲ್ಲದೆ ಸೀತಾಫಲದ ಎಲೆಗಳನ್ನು ಸೇವನೆ ಮಾಡುವುದರಿಂದ ದೇಹದ ಶಕ್ತಿಯೂ ಹೆಚ್ಚುತ್ತದೆ.
ಚರ್ಮಕ್ಕೆ ಪ್ರಯೋಜನಕಾರಿ:
ಸೀತಾಫಲದ ಎಲೆಗಳು ಚರ್ಮದ ಆರೋಗ್ಯಕ್ಕೂ ಸಹ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ವಿಟಮಿನ್ ಸಿ ಚರ್ಮಕ್ಕೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ. ಅಲ್ಲದೆ ಇದರಲ್ಲಿರುವ ಆಂಟಿಆಕ್ಸಿಡೆಂಟ್ ತ್ವಚೆಯನ್ನು ಪೋಷಿಸುತ್ತದೆ ಮತ್ತು ಇದರಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಚರ್ಮದಲ್ಲಿ ಕಾಣಿಸಿಕೊಳ್ಳುವ ದದ್ದುಗಳು ಮತ್ತು ಮೊಡವೆಗಳಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.
ಕ್ಯಾನ್ಸರ್ ಕಾಯಿಲೆಯಿಂದ ರಕ್ಷಣೆ ನೀಡುತ್ತದೆ:
ಸೀತಾಫಲದ ಎಲೆಗಳು ಕ್ಯಾನ್ಸರ್ ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅನೇಕ ಅಧ್ಯಯನಗಳು ಕಂಡುಕೊಂಡಿವೆ. ಸೀತಾಫಲದಲ್ಲಿ ಕಂಡುಬರುವ ಪೈಟೋಕೆಮಿಕಲ್ ಅಂಶವು ಅವುಗಳ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ವಿರೋಧಿ ಗುಣಲಕ್ಷಣದಿಂದಾಗಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ವಿಟಮಿನ್ ಎ ಪೋಷಕಾಂಶವು ಕ್ಯಾನ್ಸರ್ ಕೋಶಗಳನ್ನು ನಾಶಮಾಡಲು ಸಹಾಯ ಮಾಡುತ್ತದೆ.