ಬೆಂಗಳೂರು: ಖಾಸಗಿ ಬ್ಯಾಂಕ್ ಪ್ರತಿನಿಧಿಗಳ ಸೋಗಿನಲ್ಲಿ ಸೈಬರ್ ವಂಚಕರು ಟೆಕಿಯೊಬ್ಬನಿಗೆ ಮೊಬೈಲ್ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ಬರೋಬ್ಬರಿ 2.80 ಕೋಟಿ ರೂ. ವಂಚಿಸಿದ್ದಾರೆ. ವೈಟ್ ಫೀಲ್ಡ್ ನಿವಾಸಿ ದೇಬಾಶಿಷ್ ರಾಯ್ ವಂಚನೆಗೊಳಗಾದವರು.
ಅವರು ನೀಡಿದ ದೂರಿನ ಮೇರೆಗೆ ವೈಟ್ ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು, ಮೋಹಿತ್ ಜೈನ್ ಎಂಬಾತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 66(ಸಿ), ಬಿಎನ್‌ಎಸ್ ಕಲಂ 318(4), 319(2) ಅಡಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ದೂರುದಾರ ದೇಬಾಶಿಷ್ ರಾಯ್ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಕಳೆದ ನವೆಂಬರ್ 27ರಂದು ಮೋಹಿತ್ ಜೈನ್ ಹೆಸರಿನಲ್ಲಿ ದೇಬಾಶಿಷ್‌ಗೆ ವಾಟ್ಸ್‌ಆ್ಯಪ್ ಕರೆ ಮಾಡಿದ್ದು ನಾನು ಬ್ಯಾಂಕ್‌ವೊಂದರ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮಗೆ ಫ್ರೀ ಕ್ರೆಡಿಟ್ ಕಾರ್ಡ್ ಬಂದಿದೆ. ಹೀಗಾಗಿ ಏರ್‌ಟೆಲ್ ಶಾಪ್‌ಗೆ ತೆರಳಿ ನಿಮ್ಮ ಮೊಬೈಲ್ ಸಂಖ್ಯೆಗೆ ಹೊಸ ಸಿಮ್ ಕಾರ್ಡ್ ಖರೀದಿಸುವಂತೆ ಸೂಚಿಸಿದ್ದಾನೆ. ಅದನ್ನು ನಂಬಿದ ದೇಬಾಶಿಷ್, ಹೊಸ ಏರ್‌ಟೆಲ್ ಸಿಮ್ ಕಾರ್ಡ್ ಖರೀದಿಸಿದ್ದಾರೆ.
ಬಳಿಕ ಅಪರಿಚಿತರು ಡಿಸೆಂಬರ್ 1ರಂದು ಬ್ಯಾಂಕ್‌ನ ಹೆಸರಿನಲ್ಲಿ ದೇಬಾಶಿಷ್ ವಿಳಾಸಕ್ಕೆ ಗಿಫ್ಟ್ ರೂಪದಲ್ಲಿ ರೆಡ್ಮಿ 13ಸಿ ಮೊಬೈಲ್‌ನ್ನು ಕೊರಿಯರ್ ಮೂಲಕ ಕಳುಹಿಸಿದ್ದಾರೆ. ಅಪರಿಚಿತರ ಸೂಚನೆ ಮೇರೆಗೆ ದೇಬಾಶಿಷ್ ಆ ಹೊಸ ಮೊಬೈಲ್‌ಗೆ ಹೊಸ ಸಿಮ್ ಕಾರ್ಡ್ ಹಾಕಿ ಆಕ್ಟೀವೇಟ್ ಮಾಡಿ ಕೆಲವು ಮಾಹಿತಿಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಆದರೆ, ಮೊಬೈಲ್‌ಗೆ ಇ-ಮೇಲ್ ಹಾಗೂ ಬೇರೆ ಸಂದೇಶಗಳು ಬಂದಿಲ್ಲ. ಅದರಿಂದ ಅನುಮಾನಗೊಂಡ ದೇಬಾಶಿಷ್ ಡಿ.5ರಂದು ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ 2 ಖಾತೆಗಳಿಂದ ವಿವಿಧ ಹಂತಗಳಲ್ಲಿ ಒಟ್ಟು 2.80 ಕೋಟಿ ರೂ. ಕಡಿತವಾಗಿದೆ ಎಂದು ಬ್ಯಾಕ್ ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ತಾನೂ ವಂಚನೆಗೊಳಗಾಗಿರುವುದು ಗೊತ್ತಾಗಿ, ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ಮೊಬೈಲ್ ನಿಯಂತ್ರಣಕ್ಕೆ ಪಡೆದು ವಂಚನೆ: ಈ ಪ್ರಕರಣ ಸಂಬಂಧ ತನಿಖೆಗೆ ಆರಂಭಿಸಿರುವ ಪೊಲೀಸರು, ವಂಚಕರು ದೇಬಾಶಿಷ್‌ಗೆ ಕಳುಹಿಸಿದ್ದ ಮೊಬೈಲ್ ವಶಕ್ಕೆ ಪಡೆದರು. ಬಳಿಕ ಅದರಲ್ಲಿ ಕ್ಲೋನಿಂಗ್ ಮತ್ತು ಕೆಲ ಆ್ಯಪ್‌ಗ್ಳನ್ನು ಇನ್‌ಸ್ಟಾಲ್ ಮಾಡಿದ್ದನ್ನು ಪತ್ತೆ ಹಚ್ಚಿದ್ದಾರೆ. ದೇಬಾಶಿಷ್ ಮೊಬೈಲ್ ಗೆ ಸಿಮ್ ಕಾರ್ಡ್ ಹಾಕಿ ಆ್ಯಕ್ಟಿವೇಟ್ ಮಾಡುತ್ತಿದ್ದಂತೆ ಸೈಬರ್ ವಂಚಕರು ಆ ಮೊಬೈಲ್‌ನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ದೂರುದಾರನ ಖಾತೆಯಿಂದ 2.80 ಕೋಟಿ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಅಲ್ಲದೆ, ಹಣ ಕಡಿತದ ಬಗ್ಗೆ ಯಾವುದೇ ಸಂದೇಶ ಇ-ಮೇಲ್ ಮತ್ತು ಸಂದೇಶ ಹೋಗದಂತೆ ನಿಯಂತ್ರಿಸಿದ್ದರು ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.