ಮನೆ ಸುದ್ದಿ ಜಾಲ ಸೈಬರ್ ವಂಚಕರ ಹೊಸ ಗೇಮ್ ಪ್ಲಾನ್ – ಮ್ಯಾರಥಾನ್ ಹೆಸರಲ್ಲಿ ಅಕೌಂಟ್‌ನ ಹಣಕ್ಕೆ ಕನ್ನ ಹಾಕಲು...

ಸೈಬರ್ ವಂಚಕರ ಹೊಸ ಗೇಮ್ ಪ್ಲಾನ್ – ಮ್ಯಾರಥಾನ್ ಹೆಸರಲ್ಲಿ ಅಕೌಂಟ್‌ನ ಹಣಕ್ಕೆ ಕನ್ನ ಹಾಕಲು ಯತ್ನ..!

0

ಮಂಗಳೂರು : ಮ್ಯಾರಥಾನ್‌ ಹೆಸರಲ್ಲಿ ಅಕೌಂಟ್‌ಗೆ ಕನ್ನ ಹಾಕುವ ಸೈಬರ್‌ ವಂಚಕರ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಬಗ್ಗೆ ಎಚ್ಚರ ವಹಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಸಲಹೆ ನೀಡಿದ್ದಾರೆ. ಸೈಬರ್ ವಂಚಕರು ತಮ್ಮ ಕಳ್ಳ ನಡೆಯನ್ನು ದಿನಕ್ಕೊಂದರಂತೆ ಬದಲಾಯಿಸುತ್ತಿದ್ದಾರೆ.

ಈ ಕುರಿತಂತೆ ಜನಸಾಮಾನ್ಯರು ಸ್ವಲ್ಪ ಯಾಮಾರಿದರೂ ಹಣ ಖೋತಾ ಆಗೋದು ಗ್ಯಾರಂಟಿ. ಸದ್ಯ ಸೈಬರ್ ವಂಚಕರು ಕಂಡುಕೊಂಡ ಉಪಾಯವೇ ಮ್ಯಾರಥಾನ್‌. ನಿಮ್ಮದೇ ಸಿಟಿಯಲ್ಲಿ ಈ ದಿನಾಂಕಕ್ಕೆ ಮ್ಯಾರಥಾನ್ ನಡೆಯಲಿದೆ. ಗೆದ್ದವರಿಗೆ ಭರ್ಜರಿ ಬಹುಮಾನ ಮೊತ್ತ ಸಿಗಲಿದೆ ಅಂತ ಪೋಸ್ಟರ್‌, ಪ್ರೋಮೋ‌ ವೀಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಜನರ‌ ನಂಬಿಕೆ ಪಡೆಯುವುದಕ್ಕಾಗಿ ಸ್ಪಾನ್ಸರ್ಡ್ ಬೈ ಎಸ್‌ಬಿಐ ಅಂತಾ ಪೋಸ್ಟರ್‌ನಲ್ಲಿ ಹಾಕಿಕೊಳ್ಳಲಾಗಿದೆ. ಸೀ ಬ್ರೀಝ್ ಮ್ಯಾರಥಾನ್ ಅನ್ನೋ ಹೆಸರಿನಲ್ಲಿ ಆಯೋಜಿಸುತ್ತಿದೆ ಅಂತ ಆಕರ್ಷಕ‌ ಪೋಸ್ಟರ್ ರಚಿಸಲಾಗಿದೆ. ರಿಜಿಸ್ಟ್ರೇಶನ್ ಮಾಡಿಕೊಳ್ಳಲು ಮೊಬೈಲ್ ಸಂಖ್ಯೆ, ಮ್ಯಾರಥಾನ್ ನಡೆಯುವ ದಿನಾಂಕ, ಸ್ಥಳ, ಸಮಯವನ್ನೂ‌ ತೋರಿಸಲಾಗಿದೆ. ಪಕ್ಕಾ ಒರಿಜಿನಲ್ ಆಹ್ವಾನ ಪತ್ರಿಕೆಯಂತೆಯೇ ಇದನ್ನ ತಯಾರಿಸಲಾಗಿದೆ. ಸ್ವಲ್ಪ ಯಾಮಾರಿ ರಿಜಿಸ್ಟ್ರೇಶನ್‌ಗೆ‌ ಮುಂದಾದರೆ ಮೋಸದ ಜಾಲಕ್ಕೆ ಸಿಲುಕುತ್ತೀರಿ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.

ಎಪ್ರಿಲ್ 19 ರಂದು ಮಂಗಳೂರಿನ ಮಂಗಳಾ ಸ್ಟೇಡಿಯಂ ಇಂತಹ ಯಾವೊಂದು‌ ಮ್ಯಾರಥಾನ್ ಆಯೋಜಿಸಲಾಗಿಲ್ಲ. ಆದರೆ, ಮಂಗಳೂರಿನ ಜನಸಾಮಾನ್ಯರನ್ನು ಯಾಮಾರಿಸಲು ಈ ರೀತಿಯ ಪೋಸ್ಟರ್ ಅನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಮ್ಯಾರಥಾನ್ ಪಟುಗಳಿಗೆ ವಿವಿಧ ಹಂತಗಳ ರೇಸಿಗಾಗಿ ವಿವಿಧ ರೀತಿಯ ಹಣದ ಬಹುಮಾನದ ಆಮಿಷವೊಡ್ಡಿದ್ದಾರೆ. 5‌ ಕಿಮೀಗೆ 2.51 ಲಕ್ಷ, 10‌ ಕಿಮೀಗೆ 3.51 ಲಕ್ಷ ಹಾಗೂ 21 ಕಿಮೀಗೆ 5 ಲಕ್ಷ ‌ಬಹುಮಾನ ಮೊತ್ತವನ್ನು ತೋರಿಸಲಾಗಿದೆ. ಜೊತೆಗೆ ಭಾಗವಹಿಸುವ ಪ್ರತಿಯೊಬ್ಬರಿಗೂ ಶೂ, ಟೀ-ಶರ್ಟ್, ಬ್ಯಾಗ್, ಪ್ರಮಾಣಪತ್ರ ಎಲ್ಲವನ್ನ ಉಚಿತವಾಗಿ ನೀಡುವುದಾಗಿಯೂ ಹೇಳಲಾಗಿದೆ.

ಹೆಸರು ನೋಂದಾಯಿಸಿ ಎಂದು ನೀಡಲಾದ ಸಂಖ್ಯೆಗೆ ಕರೆ ಮಾಡಿದಾಗ, ಕರೆಯನ್ನು ಸ್ವೀಕರಿಸುವ ಹಿಂದಿ ಮಾತನಾಡುವ ವ್ಯಕ್ತಿಯು ‘ವಾಟ್ಸಾಪ್‌ನಲ್ಲಿ ಲಿಂಕ್ ಕಳುಹಿಸುತ್ತೇನೆ, ಆ ಮೂಲಕ ರಿಜಿಸ್ಟ್ರೇಶನ್ ಮಾಡಿಕೊಳ್ಳಿ’ ಅಂತಾ ಬಿಟ್ಟಿ ಸಲಹೆ‌ ಕೊಡುತ್ತಾನೆ. ಇದು ಸೈಬರ್ ವಂಚಕರು ಕಂಡುಕೊಂಡ ಹೊಸ ತಂತ್ರಗಾರಿಕೆ ಇರಬಹುದು ಎನ್ನುತ್ತಿದ್ದಾರೆ ಸ್ವತಃ ಕರೆ ಮಾಡಿ ವಿಚಾರಿಸಿದ ಮಂಗಳೂರಿ‌ನ ಕ್ರೀಡಾಪಟು.