ಸೈಬರ್ ಅಪರಾಧವನ್ನು ಎದುರಿಸಲು ಟೆಲಿಕಾಂ ಇಲಾಖೆಯು ಸದ್ಯ ಎಲ್ಲಾ ಆಪರೇಟರ್‌ಗಳಿಗೆ (ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ, ಬಿಎಸ್‌ಎನ್‌ಎಲ್) ಸೈಬರ್ ಅಪರಾಧ ಜಾಗೃತಿ ಕಾಲರ್ ಟ್ಯೂನ್ ಪ್ಲೇ ಮಾಡಲು ಕೇಳಿದೆ. ಈ ಕಾಲರ್ ಟ್ಯೂನ್ ಅನ್ನು ದಿನಕ್ಕೆ 8-10 ಬಾರಿ ಪ್ಲೇ ಮಾಡಲು ಸೂಚಿಸಲಾಗಿದೆ.
ಈ ಕಾಲರ್ ಟ್ಯೂನ್ ಅನ್ನು ಭಾರತೀಯ ಸೈಬರ್ ಕ್ರೈಮ್ ಕೋ-ಆರ್ಡಿನೇಷನ್ ಸೆಂಟರ್ (14C) ಒದಗಿಸುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಇದನ್ನು ಗೃಹ ಸಚಿವಾಲಯದ ಅಡಿಯಲ್ಲಿ ಕೇಂದ್ರವು ಒದಗಿಸಲಿದೆ.
ಈ ಕುರಿತು ಹೊರಡಿಸಿರುವ ಆದೇಶದಲ್ಲಿ, ‘ಕಾಲರ್ ಟ್ಯೂನ್ ಅಭಿಯಾನದ ಮೂಲಕ ಬಳಕೆದಾರರಿಗೆ ಅರಿವು ಮೂಡಿಸಲಾಗುವುದು. ಕರೆ ಮಾಡುವ ಮೊದಲು ಈ ಬಗ್ಗೆ ಘೋಷಣೆ ಮಾಡಲಾಗುವುದು. ಇದನ್ನು 14ಸಿಯ ನೋಡಲ್ ಅಧಿಕಾರಿ ಒದಗಿಸುತ್ತಾರೆ. ಇದಕ್ಕಾಗಿಯೇ ಕಾಲರ್ ಟ್ಯೂನ್ ಅನ್ನು ದಿನಕ್ಕೆ 8-10 ಬಾರಿ ಪ್ಲೇ ಮಾಡಬೇಕು. ಈ ಬಗ್ಗೆ ಟೆಲಿಕಾಂ ಆಪರೇಟರ್‌ಗಳು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸೈಬರ್ ವಂಚನೆಯ ಹಲವು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಡಿಜಿಟಲ್ ಬಂಧನ ಪ್ರಕರಣಗಳು ಕೂಡ ವೇಗವಾಗಿ ಹರಡುತ್ತಿದೆ. ಇದರಲ್ಲಿ ವಂಚಕರು ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿ ಹೀಗೆ ಇತ್ಯಾದಿಯಾಗಿ ನಟಿಸುತ್ತಾರೆ. ಇದಾದ ಬಳಿಕ ಜನರಿಂದ ಹಣ ವಸೂಲಿ ಮಾಡುತ್ತಾರೆ.
ನಕಲಿ ಡಿಜಿಟಲ್ ಬಂಧನ ಪ್ರಕರಣಗಳು ಬೆಳಕಿಗೆ
ಕೇಂದ್ರ ಮತ್ತು ಟೆಲಿಕಾಂ ಸೇವಾ ಪೂರೈಕೆದಾರರು (ಟಿಎಸ್‌ಪಿ) ಸಹ ಇದನ್ನು ತಡೆಗಟ್ಟಲು ಹರಸಾಹಸ ಪಡುತ್ತಿದೆ. ಇದರ ಸಹಾಯದಿಂದ ಭಾರತೀಯ ಮೊಬೈಲ್ ಸಂಖ್ಯೆಗಳು ಮತ್ತು ಅಂತರಾಷ್ಟ್ರೀಯ ಕರೆಗಳನ್ನು ನಿರ್ಬಂಧಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಇತ್ತೀಚೆಗೆ, ಅವುಗಳನ್ನು ನಕಲಿ ಡಿಜಿಟಲ್ ಬಂಧನದ ಸಂದರ್ಭದಲ್ಲಿ ಸ್ಕ್ಯಾಮರ್‌ಗಳು ಬಳಸುತ್ತಿದ್ದರು. ಫೆಡೆಕ್ಸ್ ಹಗರಣ ಕೂಡ ಹೆಚ್ಚು ಕಂಡುಬಂದಿದೆ.
6.69 ಲಕ್ಷ ಮೊಬೈಲ್ ನಂಬರ್ ಬ್ಲಾಕ್:
ಸೈಬರ್ ವಂಚನೆ ಪ್ರಕರಣಗಳನ್ನು ತಡೆಯಲು ಸರ್ಕಾರವು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ. ಈ ದಿಸೆಯಲ್ಲಿ ಸರ್ಕಾರ ದೇಶಾದ್ಯಂತ 6.69 ಲಕ್ಷ ಸಿಮ್ ಕಾರ್ಡ್ ಗಳನ್ನು ಬ್ಲಾಕ್ ಮಾಡಿದೆ. ಸೈಬರ್ ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ಮತ್ತು ಸೈಬರ್ ಅಪರಾಧಿಗಳನ್ನು ನಿಯಂತ್ರಿಸುವ ಉದ್ದೇಶದಿಂದ ನವೆಂಬರ್ 15, 2024 ರವರೆಗೆ 6.69 ಲಕ್ಷ ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದರೊಂದಿಗೆ ಸುಮಾರು 1,32,000 IMEI ಸಂಖ್ಯೆಗಳನ್ನು ಸಹ ನಿರ್ಬಂಧಿಸಲಾಗಿದೆ. ರಾಜ್ಯಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್ ಅವರು ಈ ಮಾಹಿತಿ ನೀಡಿದ್ದಾರೆ.
ಕಾನೂನು ಜಾರಿ ಸಂಸ್ಥೆಗಳು ಮತ್ತು ನ್ಯಾಯಾಂಗ ಅಧಿಕಾರಿಗಳ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ, ವೇಗವಾಗಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆ ಮತ್ತು ಇತರ ಸೈಬರ್ ಅಪರಾಧಗಳನ್ನು ತಡೆಯಲು ಸರ್ಕಾರವು ವೇಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.