ಮನೆ ರಾಷ್ಟ್ರೀಯ ದಿತ್ವಾ ಚಂಡಮಾರುತ – ತಮಿಳುನಾಡು, ಪುದುಚೇರಿ, ಆಂಧ್ರದಲ್ಲಿ ರೆಡ್ ಅಲರ್ಟ್

ದಿತ್ವಾ ಚಂಡಮಾರುತ – ತಮಿಳುನಾಡು, ಪುದುಚೇರಿ, ಆಂಧ್ರದಲ್ಲಿ ರೆಡ್ ಅಲರ್ಟ್

0

ಚೆನ್ನೈ/ಹೈದರಾಬಾದ್‌ : ದ್ವಿತ್ವಾ ಚಂಡಮಾರುತವು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ವೇದಾರಣ್ಯಂ ಕರಾವಳಿ ಸಮೀಪಿಸಿದ್ದು, ಇಂದು ಅತಿಯಾದ ಮಳೆಯಿಂದ ಅಲ್ಲಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಅದಕ್ಕಾಗಿ ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಸೇರಿದಂತೆ 28 ವಿಪತ್ತು ನಿರ್ವಹಣಾ ತಂಡಗಳನ್ನ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ‘ದಿತ್ವಾ’ ಚಂಡಮಾರುತವು ಶ್ರೀಲಂಕಾ ಸಮೀಪದ ಬಂಗಾಳಕೊಲ್ಲಿಯಲ್ಲಿ ಕೇಂದ್ರೀಕೃತವಾಗಿದ್ದು, ಉತ್ತರ-ಈಶಾನ್ಯ ದಿಕ್ಕಿನತ್ತ 5 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ.

ಭೂಭಾಗಕ್ಕೆ ಹತ್ತಿರವಾಗುತ್ತಿದ್ದಂತೆ ತೀವ್ರತೆ ಹೆಚ್ಚಾಗಲಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡು, ಆಂಧ್ರಪ್ರದೇಶ ಮತ್ತು ಪುದುಚೇರಿ ರಾಜ್ಯಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ ಮುನ್ಸೂಚನೆ ನೀಡಲಾಗಿದೆ.

ನ.29ರಂದು ರಾತ್ರಿ 11:30ರ ಹೊತ್ತಿಗೆ ಚಂಡಮಾರುತವು 10.7°N ಅಕ್ಷಾಂಶ ಮತ್ತು 80.6°E ರೇಖಾಂಶದ ಬಳಿ ಕೇಂದ್ರೀಕೃತವಾಗಿದೆ. ಮುಂದಿನ 24 ಗಂಟೆಗಳಲ್ಲಿ ಚಂಡ ಮಾರುತವು ಉತ್ತರ ತಮಿಳುನಾಡು, ಪುದುಚೆರಿ ಕರಾವಳಿಗೆ ಅಪ್ಪಳಿಸಲಿದ್ದು, ಭೂಕುಸಿತ ಉಂಟುಮಾಡುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ತಮಿಳುನಾಡು ಮತ್ತು ಪುದುಚೇರಿಯ ಹಲವಾರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಕಡಲೂರು, ನಾಗಪಟ್ಟಣಂ, ಮೈಲಾಡುತುರೈ, ವಿಲ್ಲುಪುರಂ ಮತ್ತು ಚೆಂಗಲ್ಪಟ್ಟು, ಪುದುಚೇರಿ-ಕಾರೈಕಲ್ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಈಗಾಗಲೇ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಶುರುವಾಗಿದ್ದು, ಚಂಡಮಾರುತದ ಪರಿಣಾಮದಿಂದಾಗಿ, ತಮಿಳುನಾಡು ಮತ್ತು ಪುದುಚೇರಿ ಕರಾವಳಿ ಪ್ರದೇಶಗಳಲ್ಲಿ ಸಮುದ್ರದ ಗಾಳಿಯ ವೇಗ ಗಂಟೆಗೆ 70 ರಿಂದ 80 ಕಿಲೋಮೀಟರ್‌ಗಳಿಗೆ ತಲುಪಿದೆ, ಕೆಲವೆಡೆ 90 ಕಿಲೋಮೀಟರ್‌ಗಳಷ್ಟು ತೀವ್ರವಾಗಿದೆ.

ಇಂದು (ನವೆಂಬರ್ 30) ಚಂಡಮಾರುತವು ತಮಿಳುನಾಡು ಮತ್ತು ಪುದುಚೇರಿ ಕರಾವಳಿಯಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ ಹಾದುಹೋಗುವ ನಿರೀಕ್ಷೆಯಿದೆ. ಆದರೂ, ಇದರ ಪರಿಣಾಮಗಳು ಸಂಜೆಯವರೆಗೂ ಮುಂದುವರಿಯಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.